ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

0
46

ಮೂಡುಬಿದಿರೆ : ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಯೋಗದೊಂದಿಗೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ 2026-27ನೇ ಸಾಲಿನ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸೋಮವಾರ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಅಭ್ಯಾಗತರನ್ನು ಹಾಗೂ ಕ್ರೀಡಾ ಪಟುಗಳನ್ನು ಬ್ಯಾಂಡ್ ಸೆಟ್, ವಾದ್ಯಗೋಷ್ಠಿ, ಹಾಗೂ ಪೂರ್ಣ ಕುಂಭ ಕಳಶದೊಂದಿಗೆ ಸ್ವಾಗತಿಸಲಾಯಿತು.

ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ಪಿ. ಎಂ. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ , , “ಮನೋಸ್ಫೂರ್ತಿಯಿಂದ ಆಟವಾಡಿ ಕ್ರೀಡೆಯನ್ನು ಆಸ್ವಾದಿಸಿ ಶಿಸ್ತಿನ ಮಕ್ಕಳಾಗಿ ಬಾಳಿ ಎಂದು ಕ್ರೀಡಾಪಟುಗಳನ್ನು ಹಾರ್ದಿಕವಾಗಿ ಅಭಿನಂದಿಸಿದರು” .

ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ರಿತೇಶ್ ಶೆಟ್ಟಿ ಮಾತನಾಡಿ ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ರೋಟರಿ ಶಾಲೆಯ ಅಚ್ಚುಕಟ್ಟಾದ ವ್ಯವಸ್ಥೆ, ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಶ್ಲಾಘಿಸುತ್ತ, ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳ ಮಹತ್ವವನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಅನಂತಕೃಷ್ಣ ರಾವ್ ಪ್ರಶಸ್ತಿ ಪದಕ ಮತ್ತು ಪಾರಿತೋಷಕಗಳನ್ನು ಅನಾವರಣ ಮಾಡಿ ” ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಕ್ರೀಡೆಯ ಮುಖಾಂತರ ಶಾರೀರಿಕ ಸ್ವಾಸ್ತ್ಯವನ್ನು ಕಾಪಾಡಿ , ಪರಸ್ಪರ ಬಾಂಧವ್ಯ ಬೆಳೆಸಿದರೆ ಮಾತ್ರ ಸಾರ್ಥಕತೆ ಸಾಧ್ಯ” ಎಂದು ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿ ಶುಭಹಾರೈಸಿದರು.

ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಅವರು ದೂರನಿಯಂತ್ರಕ (ರಿಮೋಟ್) ಮೂಲಕ ವಾಲಿಬಾಲ್ ಅಂಕಣವನ್ನು ಉದ್ಘಾಟಿಸಿ, “ಕ್ರೀಡೆ ಒಂದು ಸಂಭ್ರಮಿಸುವ ಹಬ್ಬ. ಎಲ್ಲಾ ಕ್ರೀಡಾಳುಗಳು ಕೂಡಿ ಆಡುವುದರಿಂದ ಮಾತ್ರ ಕ್ರೀಡೆಯಲ್ಲಿ ಗೆಲುವು ಸಾಧ್ಯ, ಇದು ನಮ್ಮ ಜೀವನದಲ್ಲೂ ಅನ್ವಯಿಸುತ್ತದೆ. ಮಕ್ಕಳು ಶಿಸ್ತು, ಸಮಾನ ರೀತಿಯಲ್ಲಿ ಆಡುವ ಮನೋಭಾವನೆಯನ್ನು ರೂಢಿಸಿಕೊಂಡು ಸ್ಫೂರ್ತಿದಾಯಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಶುಭಕೋರಿದರು.”

ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರೇಡ್-2 ಪ್ರಾಥಮಿಕ ಶಾಲಾ ದೈಹಿಕರ ಸಂಘದ ಅಧ್ಯಕ್ಷರಾದ ವಿನ್ನಿಫ್ರೆಡ್ ಪಿಂಟೋ, ಮಾಜಿ ಸಹಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಿವೃತ್ತ ದೈಹಿಕ ಶಿಕ್ಷಣದ ಶಿಕ್ಷಕರಾದ ನಾಗೇಶ್, ಶಾಲಾ ಆಡಳಿತಾಧಿಕಾರಿಯಾದ ಪ್ರಫುಲ್ ಡಿಸೋಜ, ವ್ಯವಸ್ಥಾಪಕರಾದ ಸತೀಶ್,
ರೋಟರಿ ಕಾಲೇಜು ವಿಭಾಗದ ಪ್ರಾಂಶುಪಾಲರಾದ ರವಿಕುಮಾರ್, ರೋಟರಿ ಕೇಂದ್ರೀಯ ಶಾಲಾ ಪ್ರಾಂಶುಪಾಲರಾದ ಲಕ್ಷ್ಮಿ ಮರಾಠೆ, ವಿವಿಧ ಶಾಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಅತಿಥಿಗಳನ್ನು ಸ್ವಾಗತಿಸಿ,ದೈಹಿಕ ಶಿಕ್ಷಕ ಹಾಗೂ ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ವಂದನಾರ್ಪಣೆ ಸಲ್ಲಿಸಿ, ಶಾಲಾ ಹಿರಿಯ ಸಂಯೋಜಕರಾದ ಗಜಾನನ ಮರಾಠೆ ಕಾರ್ಯಕ್ರಮವನ್ನು ನಿರೂಪಿಸಿದರು.