ಮುದ್ದುಕೃಷ್ಣ ಸ್ಪರ್ಧೆ, ಮೊಸರು ಕುಡಿಕೆ ಹಾಗೂ ಹಗ್ಗಜಗ್ಗಾಟ : ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಿಂಜೆಗೆ ಸೇವಾರತ್ನ ಪ್ರಶಸ್ತಿ
ಹಾವಂಜೆ : ಶ್ರೀ ದುರ್ಗಾ ಸಾರ್ವಜನಿಕ ಶಾರದೋತ್ಸವ ಸಮಿತಿ, ಹಾವಂಜೆ ಇವರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 8ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ತಂಡಗಳ ಹಗ್ಗಜಗ್ಗಾಟ ಕಾರ್ಯಕ್ರಮವು ಸೆ.6ರಂದು ಹಾವಂಜೆಯಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಹರೀಶ್ ಎಸ್. ಪೂಜಾರಿ, ಒಳಮಡಿ, ಉಡುಪಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ TAPCMS ಉಡುಪಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ಪ್ರಕೃತಿ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾದ ಪ್ರಮೋದ್ ಶೆಟ್ಟಿ, ಉದ್ಯಮಿ ರೋಷನ್ ಬಂಗೇರ, ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉದ್ಯಾವರ ವಿಭಾಗ ಮುಖ್ಯಸ್ಥರಾದ ಡಾ. ಸಂದೇಶ್ ಕುಮಾರ್ ಶೆಟ್ಟಿ ಹಾಗೂ ಧೂಮಾವತಿ ದೇವಸ್ಥಾನ, ಕಂಬಳಬೆಟ್ಟು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಿಂಜೆಗೆ ಸೇವಾರತ್ನ ಪ್ರಶಸ್ತಿ
ಕಾರ್ಯಕ್ರಮದ ವಿಶೇಷ ಘಟ್ಟವಾಗಿ ಕಳೆದ ಎರಡು ದಶಕಗಳಿಂದ ಸಮಾಜ ಸೇವೆ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಉಡುಪಿ ಜಿಲ್ಲೆಯಲ್ಲಿ ಧ್ವನಿ ಇಲ್ಲದವರ ಧ್ವನಿಯಾಗಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಿಂಜೆ ಅವರಿಗೆ ‘ಸೇವಾರತ್ನ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.

ಸಾಮಾಜಿಕ ಸೇವೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳನ್ನು ಗುರುತಿಸಿ ನೀಡಲಾದ ಈ ಗೌರವವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಮುದ್ದುಕೃಷ್ಣರ ಕಲರವ
ಬಳಿಕ ಪುಟಾಣಿ ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳಲ್ಲಿ ಕೃಷ್ಣನಂತೆ ಸಿಂಗರಿಸಿಕೊಂಡು ಆಗಮಿಸಿದ ಮಕ್ಕಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಮಕ್ಕಳ ಪ್ರತಿಭೆ ಹಾಗೂ ಕೃಷ್ಣವೇಷದ ವೈವಿಧ್ಯತೆ ನೆರೆದಿದ್ದವರ ಗಮನ ಸೆಳೆಯಿತು.
ಇದರೊಂದಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ತಂಡಗಳ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡಿದ್ದು, ಪ್ರೇಕ್ಷಕರಿಂದಲೂ ಉತ್ತಮ ಪ್ರೋತ್ಸಾಹ ದೊರೆಯಿತು.

ವಿಜೇತರಿಗೆ ನಗದು ಪುರಸ್ಕಾರ
ಸಂಜೆ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ, ಹಾವಂಜೆ, ಉದ್ಯಮಿಗಳಾದ ರಾಮಮೂರ್ತಿ ಗುಂಡಿಬೈಲು, ರಮೇಶ್ ಆಚಾರ್ಯ, ಶಶಿಧರ್ ಮೊಗವೀರ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಿಂಜೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕರಾದ ಪ್ರಶಾಂತ್ ಶೆಟ್ಟಿ, ಹಾವಂಜೆ ಅವರು ಸ್ವಾಗತಿಸಿ, ಆಗಮಿಸಿದ ಅತಿಥಿಗಳನ್ನು ಆದರಪೂರ್ವಕವಾಗಿ ಬರಮಾಡಿಕೊಂಡರು.
ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಂಕರ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ಸುಗುಣ ಶೆಟ್ಟಿ, ಕಾರ್ಯದರ್ಶಿ ಯಕ್ಷೀತ್ ಪೂಜಾರಿ, ಕೋಶಾಧಿಕಾರಿ ಧನುಷ್ ಶೆಟ್ಟಿ, ಸದಸ್ಯರಾದ ಧೀರಜ್, ನೀರಜ್, ದರ್ಶನ್ ಶೆಟ್ಟಿ, ಸೂರಜ್, ಕನಿಷ್ಠ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.
ಸೂರಜ್ ಶೆಟ್ಟಿ, ಹಾವಂಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳು ಹಾಗೂ ಸನ್ಮಾನ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯುವ ಮೂಲಕ ಸಂಭ್ರಮದಿಂದ ಸಂಪನ್ನಗೊಂಡಿತು.
