ಗುರುವಾಯನಕೆರೆ ಬಳಿ ಎಂಡಿಎಂಎ, ಗಾಂಜಾ ಪತ್ತೆ : ಇಬ್ಬರು ಬಂಧನ

0
47

ಬೆಳ್ತಂಗಡಿ : ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲಾ ಮೈದಾನದ ಸಮೀಪದ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಬಳಿ ನಾಲ್ವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದರು. ಪೊಲೀಸರು ಅವರ ಬಳಿಗೆ ತೆರಳುತ್ತಿದ್ದಂತೆ ನಾಲ್ವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲಹ್ ಅಲಿಯಾಸ್ ಅಜ್ಜರ್ ಅಲಿಯಾಸ್ ಅನ್ಸಾರ್ (21) ಹಾಗೂ ಪಿಲಿಚಂಡಿಕಲ್ಲು ನಿವಾಸಿ ಇಬ್ರಾಹಿಂ (29) ಎಂದು ಗುರುತಿಸಲಾಗಿದೆ.

ಬಂಧಿತ ಅನ್ಸಾರ್‌ನಿಂದ ಸುಮಾರು ₹5,000 ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಇಬ್ರಾಹಿಂನಿಂದ 29 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿರುವ ಹಮ್ಜತ್ ಕರಾರ್ ಹಾಗೂ ನೌಶಾದ್ ಎಂಬವರ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಾದಕ ದ್ರವ್ಯಗಳ ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.