ಉಡುಪಿ : ಆದಿಉಡುಪಿ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ 2020ರಲ್ಲಿ ಉದ್ಘಾಟನೆಗೊಂಡಿದ್ದ ಅಭಿವೃದ್ಧಿಪಡಿಸಿದ ನಿತ್ಯಮಾರುಕಟ್ಟೆ ನಿವೇಶನವನ್ನು ಅಧಿಕಾರಿಗಳು ‘ಲೀಸ್ ಕಂ ಸೇಲ್’ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸುಮಾರು 40 ಲಕ್ಷ ರೂ. ಮೌಲ್ಯದ ಇಂರ್ಟಲಾಕ್, ಶೆಡ್ ಹಾಗೂ ಬೆಲೆಬಾಳುವ ಮರಗಳನ್ನು ನಾಶಪಡಿಸಲಾಗಿದೆ ಎಂದು ಎ.ಪಿ.ಎಂ.ಸಿ. ರಕ್ಷಣಾ ಸಮಿತಿ ಅಧ್ಯಕ್ಷ ವಿಜಯಾ ಕೊಡಿವೂರು ಆರೋಪಿಸಿದರು.
ಮಾರುಕಟ್ಟೆ ಮುಂಭಾಗ ಎ.ಪಿ.ಎಂ.ಸಿ. ರಕ್ಷಣಾ ಸಮಿತಿ ಹಾಗೂ ವರ್ತಕರ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮಾರುಕಟ್ಟೆಯ 175 ನಿತ್ಯ ಹರಾಜು ಕಟ್ಟೆಗಳಲ್ಲಿ ಪ್ರತಿದಿನ ರಾತ್ರಿ 3ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಪರವಾನಗಿ ಇಲ್ಲದೆ ಅಕ್ರಮ ವ್ಯಾಪಾರ ನಡೆಯುತ್ತಿದೆ. ಪ್ರತಿದಿನ 1 ಕೋಟಿ ರೂ. ವ್ಯಾಪಾರ ನಡೆಯುತ್ತಿದ್ದು, ನಿಯಮದಂತೆ ಶೇ. 0.6ರಷ್ಟು ಮಾರುಕಟ್ಟೆ ಶುಲ್ಕದ ರೂಪದಲ್ಲಿ ಸರ್ಕಾರಕ್ಕೆ ವರ್ಷಕ್ಕೆ ಸುಮಾರು 11 ಕೋಟಿ ರೂ. ನೀಡಬೇಕಿದೆ. ಕೇವಲ 60 ಕಟ್ಟೆಗಳಿಂದ 12,000 ರೂ. ಬಾಡಿಗೆ ಬರುತ್ತಿದೆ ಎಂದು ತೋರಿಸಲಾಗುತ್ತಿದೆ. ಆದರೆ ಪ್ರತಿಯೊಂದು ಕಟ್ಟೆಯಿಂದ ದಿನಕ್ಕೆ 200 ರೂ. ವಸೂಲಿ ಮಾಡಲಾಗುತ್ತಿದ್ದು, ಬಾಕಿ 115 ಕಟ್ಟೆಗಳ ಹಣ ಎಲ್ಲೆ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹ
ಆದಿಉಡುಪಿ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ತಕ್ಷಣವೇ ತಡೆ ನೀಡಬೇಕು. ಅಕ್ರಮ ವ್ಯಾಪಾರವನ್ನು ಸ್ಥಗಿತಗೊಳಿಸಬೇಕು. ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಂಡು ಸಾಮಾನ್ಯ ವರ್ತಕರು ಮತ್ತು ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜನಧ್ವನಿಯ ನಟೇಶ್, ಎ.ಪಿ.ಎಂ.ಸಿ. ಸದಸ್ಯ ರಮಾಕಾಂತ್ ಕಾಮತ್, ವರ್ತಕರಾದ ಪ್ರಭುಗೌಡ, ಫಯಾಜ್, ಜಗಳೂರಯ್ಯ, ರಮಾನಾಥ ಪೈ, ಮುಖಂಡ ರಾಧಷ್ಣ ಮಲ್ಪೆ ಮತ್ತಿತರರು ಉಪಸ್ಥಿತರಿದ್ದರು.

