ಶಸ್ತ್ರಚಿಕಿತ್ಸೆ ವೇಳೆ ಕಂಡ ದೃಶ್ಯಕ್ಕೆ ವೈದ್ಯರೇ ದಂಗು

0
49

ಮಹಿಳೆಯ ಹೊಟ್ಟೆಯಿಂದ 20 ವಸ್ತುಗಳ ಹೊರತೆಗೆತ

ತೀವ್ರ ಹೊಟ್ಟೆನೋವು ಹಾಗೂ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 33 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಅಚ್ಚರಿಯ ರೀತಿಯಲ್ಲಿ ಪೆನ್ನುಗಳು, ಮರದ ಚಮಚಗಳು ಹಾಗೂ ಮೇಣದಬತ್ತಿ ಪತ್ತೆಯಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಯಶಸ್ವಿಯಾಗಿ ಹೊರತೆಗೆದ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯ ಖಾಸಗಿ ಮಾತಾಶ್ರೀ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಪೆಟ್ಲೂರಿವಾರಿಪಾಲೆಂ ಗ್ರಾಮದ 33 ವರ್ಷದ ವಿವಾಹಿತ ಮಹಿಳೆಗೆ ಶನಿವಾರ ಏಕಾಏಕಿ ತೀವ್ರ ಎದೆ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ವಿವಿಧ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ನಡೆಸಿದಾಗ ಮಹಿಳೆಯ ಹೊಟ್ಟೆಯೊಳಗೆ ಲೋಹ ಮತ್ತು ಇತರ ವಸ್ತುಗಳು ಇರುವುದು ಪತ್ತೆಯಾಗಿದೆ. ಬಳಿಕ ಸರ್ಜಿಕಲ್ ಸ್ಪೆಷಲಿಸ್ಟ್ ಡಾ. ಪಿ. ರಾಮಚಂದ್ರ ರೆಡ್ಡಿ ನೇತೃತ್ವದ ವೈದ್ಯರ ತಂಡ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದೆ.

ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಜಠರದಿಂದ 14 ಬಾಲ್‌ಪಾಯಿಂಟ್ ಪೆನ್ನುಗಳು, 5 ಸಣ್ಣ ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ವೈದ್ಯರು ಹೊರತೆಗೆದಿದ್ದಾರೆ. ಪೆನ್ನುಗಳ ಪೈಕಿ ಒಂದು ಪೆನ್ನಿಗೆ ಮುಚ್ಚಳ ಇರಲಿಲ್ಲ. ಅದರ ತುದಿ ಹೊಟ್ಟೆಯ ಒಳಭಾಗಕ್ಕೆ ಚುಚ್ಚಿ ಗಾಯವಾಗಿದ್ದರಿಂದ ಮಹಿಳೆಗೆ ತೀವ್ರ ನೋವು ಉಂಟಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆ; ವಿಚ್ಛೇದನದ ಬಳಿಕ ಖಿನ್ನತೆ ಹೆಚ್ಚಳ

ಮಹಿಳೆ ಇಷ್ಟೊಂದು ವಸ್ತುಗಳನ್ನು ಯಾವಾಗ ಹಾಗೂ ಹೇಗೆ ನುಂಗಿದ್ದರು ಎಂಬುದು ಆರಂಭದಲ್ಲಿ ವೈದ್ಯರಿಗೂ ಅಚ್ಚರಿ ಮೂಡಿಸಿತ್ತು. ಈ ಕುರಿತು ಆಕೆಯ ತಂದೆ ನೋಮುಲ ಹನುಮಂತರಾವ್ ನೀಡಿದ ಮಾಹಿತಿಯ ಪ್ರಕಾರ, ಮಹಿಳೆ ಕಳೆದ ಸುಮಾರು 10 ವರ್ಷಗಳಿಂದ ತೀವ್ರ ಮಾನಸಿಕ ಖಿನ್ನತೆ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ, ಸುಮಾರು ಎರಡು ತಿಂಗಳ ಹಿಂದಷ್ಟೇ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಆಕೆಯ ಮಾನಸಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಈ ವಸ್ತುಗಳನ್ನು ನುಂಗಿರಬಹುದು ಎಂದು ಶಂಕಿಸಲಾಗಿದೆ.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ವೈದ್ಯರು ಹಾಗೂ ಕುಟುಂಬಸ್ಥರನ್ನೂ ಅಚ್ಚರಿಗೊಳಿಸಿದೆ.