ಕಾಸರಗೋಡು ದಸರಾ ಕವಿಗೋಷ್ಠಿಗೆ ಡಾ. ಜಯಪ್ಪ ಹೊನ್ನಾಳಿ ಘನ ಅಧ್ಯಕ್ಷತೆ

0
6

ಕಾಸರಗೋಡು : ಕನ್ನಡ ಭವನದ ಆಶ್ರಯದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ದಸರಾ ಕವಿಗೋಷ್ಠಿಗೆ ಖ್ಯಾತ ಕವಿ, ಮೈಸೂರಿನ (ಜಯ ಕವಿ ಮೈಸೂರು) ಡಾ. ಜಯಪ್ಪ ಹೊನ್ನಾಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ವಾಚನಾಲಯ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಂಯುಕ್ತ ಆಶ್ರಯದಲ್ಲಿ ದಸರಾ ಸಾಂಸ್ಕೃತಿಕೋತ್ಸವ ಆಯೋಜಿಸಲಾಗಿದೆ. 2007ರಿಂದ ಕನ್ನಡ ಭವನವು ಜಿಲ್ಲೆಯ ವಿವಿಧೆಡೆ ದಸರಾ ಅಂಗವಾಗಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಈ ಬಾರಿಯ ದಸರಾ ಕವಿಗೋಷ್ಠಿಯನ್ನು ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಉದ್ಘಾಟಿಸಲಿದ್ದಾರೆ. ಅಂತರ್‌ರಾಜ್ಯ ಮಟ್ಟದಲ್ಲಿ ಆಯ್ಕೆಯಾದ 51 ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಲಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ ‘ಕಾಸರಗೋಡು ದಸರಾ ಕವಿಶ್ರೇಷ್ಠ–2026’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, 21 ಮಂದಿ ಶ್ರೇಷ್ಠ ಕವಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಮೈಸೂರು ದಸರಾ ಕವಿಗೋಷ್ಠಿಗೂ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಾಳಿ ಅವರು ಕಾಸರಗೋಡು ದಸರಾ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸುತ್ತಿರುವುದು ಕವಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ ಎಂದು ಕಾಸರಗೋಡು ದಸರಾ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯ್ಕ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.