ಅಕ್ರಮ ಕಲ್ಲು ಕ್ವಾರಿ ಸ್ಫೋಟ : ಇಬ್ಬರು ಆರೋಪಿಗಳ ಬಂಧನ

0
46

ಉಡುಪಿ : ಯಾವುದೇ ಪೂರ್ವಾಪರ ಪರವಾನಗಿ ಇಲ್ಲದೆ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸ್ಫೋಟಕ ಬಳಸಿ ಕಲ್ಲು ಕ್ವಾರಿ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೆ. ಗೋವಿಂದ ರಾಜ್ (40) ಹಾಗೂ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ, ಪ್ರಸ್ತುತ ಕಾರ್ಕಳದ ಹಾಳೆಕಟ್ಟೆಯಲ್ಲಿ ವಾಸವಿರುವ ಶೇಖಪ್ಪ ಚಲವಾದಿ ಅಲಿಯಾಸ್ ಚಂದ್ರು (28) ಬಂಧಿತ ಆರೋಪಿಗಳು.

ಘಟನೆಯ ವಿವರ

ಉಡುಪಿ ತಾಲೂಕಿನ ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಸರ್ವೆ ನಂಬರ್ 112/2ರ 1.54 ಎಕರೆ ವಿಸ್ತೀರ್ಣದ ಸರ್ಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ, ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸಲಾಗುತ್ತಿತ್ತು. ಸೆಪ್ಟೆಂಬರ್ 5ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಈ ಅಕ್ರಮ ಕೃತ್ಯ ನಡೆದಿತ್ತು.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಾಹನಗಳು ಜಪ್ತಿ

ಪ್ರಕರಣದ ತನಿಖೆ ಕೈಗೊಂಡ ಮಣಿಪಾಲ ಠಾಣೆಯ ಪಿ.ಎಸ್.ಐ ತಿಮ್ಮೇಶ್ ಬಿ.ಎನ್. ನೇತೃತ್ವದ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಡ್ರಿಲ್ಲಿಂಗ್ ಕಂಪ್ರೆಸರ್ ಯಂತ್ರ ಅಳವಡಿತ ಮಹೀಂದ್ರಾ ಟ್ರ್ಯಾಕ್ಟರ್ ಹಾಗೂ ನಿಸಾನ್ ಟೆರಾನೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮತ್ತು ಜಪ್ತಿ ಮಾಡಿದ ಸ್ವತ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.