ಮಂಗಳೂರು ಸಂಪುಟ ಸಭೆಯಲ್ಲಿ ತುಳು ಅಧಿಕೃತತೆ ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಸಿಎಂ ಖಡಕ್ ನಿರ್ಧಾರ ಕೈಗೊಳ್ಳಲಿ: ತುಳುನಾಡು ಒಕ್ಕೂಟ ಆಗ್ರಹ

0
5


​ಮಂಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ತುಳು ಭಾಷೆಯ ಅಧಿಕೃತತೆ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಗಳು ದಿಟ್ಟ ಮತ್ತು ಖಡಕ್ ನಿರ್ಧಾರ ಕೈಗೊಳ್ಳಬೇಕು ಎಂದು ತುಳುನಾಡು ಒಕ್ಕೂಟದ (ಬೆಳ್ತಂಗಡಿ) ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ಆಗ್ರಹಿಸಿದ್ದಾರೆ. ಕರಾವಳಿಯ ಸಮಗ್ರ ಅಭಿವೃದ್ಧಿ ಮತ್ತು ಸ್ಥಳೀಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಸ್ಪಂದಿಸಬೇಕೆಂದು ಒತ್ತಾಯಿಸಿರುವ ಅವರು, ಕರಾವಳಿಯ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
​ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಬೇಕು. ಹಾಗೆಯೇ, ಕರಾವಳಿ ಭಾಗದ ರೈತರು ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕೆ ಆತಂಕ ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಯಥಾವತ್ತಾಗಿ ಜಾರಿಗೆ ತರದೆ, ಸಂಪೂರ್ಣವಾಗಿ ಪುನರ್ ಪರಿಶೀಲಿಸಬೇಕು. ಇದರೊಂದಿಗೆ ಮಲೆನಾಡು ಹಾಗೂ ಕರಾವಳಿ ಭಾಗದ ಕೃಷಿಕರ ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸಲು ವಿಶೇಷ ಆದ್ಯತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
​ಕರಾವಳಿ ಭಾಗದ ದೀರ್ಘಕಾಲದ ಈ ಸಮಸ್ಯೆಗಳಿಗೆ ಇನ್ನು ಮುಂದೆ ಕೇವಲ ಭರವಸೆಗಳು ಸಾಲದು ಎಂದು ತುಳುನಾಡು ಒಕ್ಕೂಟ ಸ್ಪಷ್ಟಪಡಿಸಿದೆ. ಮುಂಬರುವ ಮಂಗಳೂರು ಸಂಪುಟ ಸಭೆಯಲ್ಲಿ ಈ ಕುರಿತು ಸ್ಪಷ್ಟ ಮತ್ತು ಕಠಿಣ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒಕ್ಕೂಟವು ಬಲವಾಗಿ ಒತ್ತಾಯಿಸಿದೆ.