ಪುತ್ತೂರು : ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಘೋಷಣೆ ಹಾಗೂ ಮಠ–ಮಂದಿರಗಳಿಗೆ ₹1 ಕೋಟಿ ಅನುದಾನ ಘೋಷಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ.
ತುಳುಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಹತ್ವದ ಬೆಳವಣಿಗೆಯಾಗಿದೆ. ಪುರಾತನ ಭಾಷೆಯಾದ ತುಳುವಿಗೆ ಸಂದ ಗೌರವ ಇದಾಗಿದ್ದು, ಮುಂದಿನ ದಿನಗಳಲ್ಲಿ ತುಳುಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುವಂತಾಗಬೇಕು ಎಂದು ಅವರು ಆಶಿಸಿದರು.
ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳೊಂದಿಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಠ–ಮಂದಿರಗಳಿಗೆ ಅನುದಾನ ಮಂಜೂರು ಮಾಡಿರುವುದು ಸ್ವಾಗತಾರ್ಹ. ಈ ಅನುದಾನದಲ್ಲಿ ಮಾಣಿಲ ಶ್ರೀಧಾಮಕ್ಕೂ ಸ್ಥಾನ ದೊರೆತಿರುವುದು ಕ್ಷೇತ್ರದ ಭಕ್ತರು ಹಾಗೂ ಆಡಳಿತ ಮಂಡಳಿಗೆ ಸಂತಸ ತಂದಿದೆ ಎಂದು ಸ್ವಾಮೀಜಿ ಹೇಳಿದರು.
ತುಳುಭಾಷೆಯ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಅದರ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರದ ಈ ನಿರ್ಧಾರ ಮತ್ತಷ್ಟು ಪ್ರೋತ್ಸಾಹ ನೀಡಲಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ತುಳುಭಾಷೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸದಸ್ಯರು ಹಾಗೂ ಶಾಸಕರಿಗೆ ಮಾಣಿಲ ಶ್ರೀಧಾಮದ ಪರವಾಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

