ಗುಂಡ್ಯಡ್ಕ ಶ್ರೀನಿವಾಸಪುರದಲ್ಲಿ ಕರಾಡ ಬ್ರಾಹ್ಮಣ ಸಮಾಜ ಸಂಘದ ಮಹಾಸಭೆ

0
11

ಸಮಾಜ ಬಾಂಧವರ ಸಮ್ಮಿಲನಕ್ಕೆ ಸಜ್ಜು – ಆರೋಗ್ಯ ಜಾಗೃತಿ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

ಸಮಾಜದ ಸಂಘಟನೆ, ಸದಸ್ಯರ ಸೌಹಾರ್ದತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಕರಾಡ ಬ್ರಾಹ್ಮಣ ಸಮಾಜ ಸಂಘದ 2025-26ನೇ ಸಾಲಿನ ಮಹಾಸಭೆ ಸೆ.27ರಂದು ಶ್ರೀನಿವಾಸಪುರದಲ್ಲಿ ನಡೆಯಲಿದೆ.

ಕರಾಡ ಬ್ರಾಹ್ಮಣ ಸಮಾಜ ಸಂಘದ 2025-26ನೇ ಸಾಲಿನ ಮಹಾಸಭೆಯು ಸೆ.27ರಂದು ಬೆಳಗ್ಗೆ 10 ಗಂಟೆಗೆ ಸಂಘದ ಕೇಂದ್ರ ಕಚೇರಿ, ರುಕ್ಮಿಣೀ ಪಾಂಡುರಂಗ ಸಭಾಭವನ, ಶ್ರೀನಿವಾಸಪುರದಲ್ಲಿ ನಡೆಯಲಿದೆ.

ಸಮಾಜದ ಎಲ್ಲ ಸದಸ್ಯರು ಹಾಗೂ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸಭಾ ಕಾರ್ಯಕ್ರಮವು ಆಸನ ಸ್ವೀಕಾರ ಮತ್ತು ಪ್ರಾರ್ಥನೆಯೊಂದಿಗೆ ಆರಂಭವಾಗಲಿದ್ದು, ಬಳಿಕ ಸ್ವಾಗತ ಭಾಷಣ ನಡೆಯಲಿದೆ. ಕಳೆದ ವರ್ಷ ನಿಧನರಾದ ಸಮಾಜದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ ‘ಜೀವನಶೈಲಿ ಹಾಗೂ ಹೃದ್ರೋಗ ಸಮಸ್ಯೆಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

ಹಿರಿಯರಿಗೆ ಗೌರವಾರ್ಪಣೆ, ವಾರ್ಷಿಕ ವರದಿ ವಾಚನ, ಸಾಧಕರಿಗೆ ಸನ್ಮಾನ, ಆಯ-ವ್ಯಯ ಮಂಡನೆ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಅಂತಿಮವಾಗಿ ಅಧ್ಯಕ್ಷರ ಭಾಷಣ ಮತ್ತು ವಂದನಾರ್ಪಣೆ ನಡೆಯಲಿದೆ.

“ಸಮಾಜದ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ದೇವರ ಕೃಪೆ, ಹಿರಿಯರ ಆಶೀರ್ವಾದ ಹಾಗೂ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾಜ ಇನ್ನಷ್ಟು ಪ್ರಗತಿಯತ್ತ ಸಾಗಲಿ.”

ಸಂಘದ ಕಾರ್ಯದರ್ಶಿ ಚಂದ್ರಶೇಖರ ಭಟ್ ಕಟೀಲು, ಕೋಶಾಧ್ಯಕ್ಷ ಕೆ. ರಾಮಚಂದ್ರ ಭಟ್ ನಾಟೇಕರ್, ಅಧ್ಯಕ್ಷ ಪ್ರಭಾಕರ ಭಾಟೆ ಹಾಗೂ ಸರ್ವ ಸದಸ್ಯರು ಮಹಾಸಭೆಗೆ ಸವಿನಯ ಆಹ್ವಾನ ನೀಡಿದ್ದಾರೆ.

-ಮಂದಾರ ರಾಜೇಶ್ ಭಟ್