ರೈಲಿಗಾಗಿ ಕಾಯುತ್ತಿದ್ದವನ ಮೇಲೆ ಏಕಾಏಕಿ ಹಲ್ಲೆ ; ಐವರು ಅಪರಿಚಿತರಿಂದ ಕೃತ್ಯ

0
28

ಪುತ್ತೂರು : ಆರ್ಲಪದವು ನಿವಾಸಿ ಚಿತ್ರಕಲಾವಿದ ಶ್ರೀನಿವಾಸ್ (40) ಎಂಬವರು ರೈಲು ನಿಲ್ದಾಣದಲ್ಲಿ ಹಲ್ಲೆಗೊಳಗಾಗಿರುವ ಘಟನೆ ಸೆ.18ರಂದು ರಾತ್ರಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಶ್ರೀನಿವಾಸ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುಪತಿಯಲ್ಲಿರುವ ಸಹೋದರನನ್ನು ಭೇಟಿಯಾಗಲು ತೆರಳುವ ಉದ್ದೇಶದಿಂದ ಸೆ.18ರಂದು ರಾತ್ರಿ ಬೆಂಗಳೂರು ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

“ರೈಲು ನಿಲ್ದಾಣದಲ್ಲಿ ಬೆಂಗಳೂರು ರೈಲಿಗಾಗಿ ಕಾಯುತ್ತಿದ್ದ ವೇಳೆ ಹಿಂದಿಯಲ್ಲಿ ಮಾತನಾಡಿಕೊಂಡು ಬಂದ ಐವರು ನನ್ನೊಂದಿಗೆ ಮಾತಿಗೆ ಮಾತು ಬೆಳೆಸಿ ಬಳಿಕ ಹಲ್ಲೆ ನಡೆಸಿದರು. ಹಲ್ಲೆಯಿಂದ ಗಾಯಗೊಂಡಾಗ ಸ್ಟೇಷನ್ ಮಾಸ್ಟರ್ ಸ್ಥಳಕ್ಕೆ ಆಗಮಿಸಿದರು. ಬಳಿಕ ಆಟೋ ರಿಕ್ಷಾ ಚಾಲಕರೊಬ್ಬರು ನನ್ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಅವರು ಹೇಳಿದ್ದಾರೆ.

ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಮಾಹಿತಿ ಪಡೆದ ರೈಲ್ವೇ ಪೊಲೀಸರು ಮಂಗಳೂರಿಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.