ಮೂಡುಬಿದಿರೆ ತುಳುಕೂಟದಿಂದ ಸ್ವಾಗತ, ಪ್ರಮುಖರಿಗೆ ಅಭಿನಂದನೆ
ಮೂಡುಬಿದಿರೆ: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಮಹತ್ವದ ತೀರ್ಮಾನ ಕೈಗೊಂಡಿರುವುದನ್ನು ಮೂಡುಬಿದಿರೆ ತುಳುಕೂಟ ಸ್ವಾಗತಿಸಿದೆ.
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂದು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ, ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ತೀರ್ಮಾನಿಸಿರುವುದು ತುಳುವರಿಗೆ ಸಂತಸ ಹಾಗೂ ಸಂಭ್ರಮಕ್ಕೆ ಕಾರಣವಾಗಿದೆ ಎಂದು ಮೂಡುಬಿದಿರೆ ತುಳುಕೂಟದ ಸ್ಥಾಪಕ ಅಧ್ಯಕ್ಷರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಸದಸ್ಯರಾದ ಎಂ. ಚಂದ್ರಹಾಸ ದೇವಾಡಿಗ ತಿಳಿಸಿದ್ದಾರೆ.
ತುಳು ಭಾಷೆಯ ಪರವಾಗಿ ನಿರಂತರವಾಗಿ ಪ್ರಯತ್ನ ನಡೆಸಿದ ಪ್ರಮುಖ ಶಾಸಕ ಅಶೋಕ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ತುಳುಕೂಟದ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ. ಇದೇ ವೇಳೆ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಕ್ಲಪ್ತ ಸಮಯದಲ್ಲಿ ವರದಿ ಸಲ್ಲಿಸಿ ಸಹಕರಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೂ ಅಭಿನಂದನೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
37 ವರ್ಷಗಳ ತುಳು ಭಾಷಾ ಹೋರಾಟ
1989ರಲ್ಲಿ ಸ್ಥಾಪನೆಯಾದ ಮೂಡುಬಿದಿರೆ ತುಳುಕೂಟವು ಕಳೆದ 37 ವರ್ಷಗಳಿಂದ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ತುಳು ಭಾಷೆಗೆ ಸೂಕ್ತವಾದ ಅಧಿಕೃತ ಸ್ಥಾನಮಾನ ದೊರಕಬೇಕು ಎಂಬ ಆಶಯದೊಂದಿಗೆ ತುಳುಕೂಟವು ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಧ್ವನಿ ಎತ್ತುತ್ತಾ ಬಂದಿದೆ.
ರಾಜ್ಯ ಸರ್ಕಾರದ ಈ ನಿರ್ಧಾರವು ತುಳು ಭಾಷೆಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿರುವ ಚಂದ್ರಹಾಸ ದೇವಾಡಿಗ, ತುಳು ಭಾಷೆಯ ಉಳಿವು, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಅದರ ಶ್ರೀಮಂತ ಪರಂಪರೆಯನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ತುಳುವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದ್ದಾರೆ.

