
ಬಂದಾರು: ಶಿವಗೆಳೆಯರ ಬಳಗ ಹಾಗೂ ನವ್ಯಶ್ರೀ ಯುವತಿ ಮಂಡಲ, ಮೈರೋಳ್ತಡ್ಕ–ಬಂದಾರು ಇವರ ಸಂಯುಕ್ತ ಆಶ್ರಯದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14ರಂದು ಮೈರೋಳ್ತಡ್ಕ ವಠಾರದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಸಮಿತಿಯ ಗೌರವಾರ್ಪಣೆಯನ್ನು ಸ್ವೀಕರಿಸಿದರು. ಬಳಿಕ ಶಿವಾಜಿ ಫ್ರೆಂಡ್ಸ್ ನೇತೃತ್ವದ ಶಿವನಗರ ಸರ್ಕಲ್ ಬಳಿಯಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀದೇವಿ ಪ್ರತಿಷ್ಠಾನದ ಅಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿವಗೆಳೆಯರ ಬಳಗದ ಅಧ್ಯಕ್ಷ ಜಗದೀಶ್ ಗೌಡ ಕೊಂಬೇಡಿ, ಉಪಾಧ್ಯಕ್ಷ ದಾಮೋದರ ಗೌಡ ಚಾಕೋಟೆದಡಿ, ಕಾರ್ಯದರ್ಶಿ ಚೇತನ್ ಗೌಡ ಕುರಿಯಾಳ, ಜೊತೆ ಕಾರ್ಯದರ್ಶಿ ಚಿದಾನಂದ ಗೌಡ ಪಾಂಜಾಳ ಹಾಗೂ ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊಳ್ಳಕೋಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪಾಂಚಜನ್ಯ ಗೆಳೆಯರ ಬಳಗ ಪಾಂಜಾಳ ಹಾಗೂ ಶ್ರೀ ಸದಾಶಿವ ಭಜನಾ ಮಂಡಳಿ ಕುರಾಯ ವತಿಯಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಲಕ್ಕಿಡಿಪ್ ಡ್ರಾ, ಮಕ್ಕಳ ಕುಣಿತ ಭಜನೆ ಹಾಗೂ ಚೆಂಡೆ ವಾದನ ನಡೆಯಿತು. ಭಾರತ ಮಾತೆಯ ಭಾವಚಿತ್ರದೊಂದಿಗೆ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಪೂಜೆ, ಪ್ರಸಾದ, ಸಿಹಿತಿಂಡಿ, ಪಾನೀಯ ಹಾಗೂ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಬಳಿಕ ವೈಭವಪೂರ್ಣ ಮೆರವಣಿಗೆಯು ಮುಗೇರಡ್ಕ ನೇತ್ರಾವತಿ ನದಿ ತಲುಪಿ ಗಣೇಶ ಮೂರ್ತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ 31ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಮುಖರಾದ ಮಹೇಶ್ ಕೋಟ್ಯಾನ್ ಜೇಂಕ್ಯಾರ್, ಹರೀಶ್ ಗೌಡ ಕೊಯಿಲ ಕಾಯರ್ತಡ್ಕ, ಪ್ರೀತಮ್ ಧರ್ಮಸ್ಥಳ, ಹರ್ಷ ಜೈನ್ ಧರ್ಮಸ್ಥಳ, ರಾಜೇಶ್ ಎಂ.ಕೆ. ಕಾಯರ್ತಡ್ಕ, ರಾಜೇಶ್ ಆರಂಬೋಡಿ, ಜಗದೀಶ್ ಗೌಡ ದಿಡುಪೆ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ ಸೇರಿದಂತೆ ಹಲವು ಗಣ್ಯರು, ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

