“ರಾಷ್ಟ್ರೀಯ ರೇಷ್ಮೆ ದಿನ-ಮೈಸೂರು ಇತಿಹಾಸದ ರೇಷ್ಮೆಕ್ರಾಂತಿ”

0
8

ಮೈಸೂರು ರೇಷ್ಮೆ ಟಿಪ್ಪು ಕಂಡ ಕನಸು, ಒಡೆಯರ್ ಕಟ್ಟಿದ ಸಾಮ್ರಾಜ್ಯ.ರೇಷ್ಮೆ ಬೆಳೆಯ ಮೈಸೂರು ಸಾಮ್ರಾಜ್ಯದ ಇತಿಹಾಸ 250 ವರ್ಷ ಹಳೆಯದು. ಇದು ಕೇವಲ ಕೈಗಾರಿಕೆ ಅಲ್ಲ, ಅದು ಮೈಸೂರು ಅರಸರ ದೂರದೃಷ್ಟಿಯ ಕಥೆ.

ಟಿಪ್ಪು ಸುಲ್ತಾನ್ ನ ರೇಷ್ಮೆ ಕ್ರಾಂತಿ (1780-1790):

ಮೈಸೂರು ರೇಷ್ಮೆಯ ಮೂಲ ಇಂದಿನ ಚೀನಾ ಅಲ್ಲ, ಮೈಸೂರಿನ ಹುಲಿ ಟಿಪ್ಪು ಸುಲ್ತಾನ್. ಇತಿಹಾಸದ ಪ್ರಕಾರ, ಚೀನಾ ರಾಯಭಾರಿ
ಯೊಬ್ಬರು ಟಿಪ್ಪುಗೆ ನೀಡಿದ ಅಮೂಲ್ಯ ರೇಷ್ಮೆ ಬಟ್ಟೆಯ ಹೊಳಪಿಗೆ ಮನಸೋತ ಟಿಪ್ಪು, “ನನ್ನ ರಾಜ್ಯದಲ್ಲೇ ಇದನ್ನು ಬೆಳೆಯಬೇಕು” ಎಂದು ಪಣ ತೊಟ್ಟರು.1785ರಲ್ಲಿ ಟಿಪ್ಪು ಚೀನಾ ಮತ್ತು ಬಂಗಾಳಕ್ಕೆ ಎರಡು ನಿಯೋಗಗಳನ್ನು ಕಳುಹಿಸಿದರು. ಬಂಗಾಳದ ನಿಯೋಗ ಚೀನಾದ ‘ಎಲ್ಲೋ ಬೈವೋಲ್ಟೈನ್’ ತಳಿಯ ಮೊಟ್ಟೆ ಮತ್ತು ಹಿಪ್ಪುನೇರಳೆ ಕಡ್ಡಿಗಳನ್ನು ತಂದಿತು. ಮೈಸೂರಿನ ವಾತಾವರಣದಲ್ಲಿ ಈ ಹುಳು ಚಳಿಗಾಲದ ನಿದ್ರೆ ಬಿಟ್ಟು, ತನ್ನ ತಳಿಯನ್ನೇ ಬದಲಾಯಿಸಿ “ಪ್ಯೂರ್ ಮೈಸೂರು ರೇಸ್” ಎಂಬ ಹೊಸ ತಳಿಯಾಗಿ ಬೆಳೆಯಿತು. ಇದನ್ನೇ ಅವರು ಚನ್ನಪಟ್ಟಣದಲ್ಲಿ ಮೊದಲ ರೇಷ್ಮೆ ಸಾಕಣೆ ಕೇಂದ್ರ ಸ್ಥಾಪಿಸಿ ಬೆಳೆಸಿದರು. 1791ರಲ್ಲೇ ಬ್ರಿಟಿಷ್ ಅಧಿಕಾರಿ ರಾಬರ್ಟ್ ಆಂಡ್ರ್ಯೂಸ್ ಶ್ರೀರಂಗಪಟ್ಟಣದಲ್ಲಿ ಹೈದರಾಲಿ ಕಾಲದ ರೇಷ್ಮೆ ಬೆಳೆಗಾರರನ್ನು ಭೇಟಿಯಾಗಿದ್ದಾಗಿ ವರದಿ ಬರೆದಿದ್ದಾರೆ. ಟಿಪ್ಪು ಮರಣದ (1799) ನಂತರ ಉದ್ಯಮ ಕುಸಿಯಿತು.

ಪುನರುಜ್ಜೀವನ ವಿದೇಶಿಯರ ಕೊಡುಗೆ (1866-1896):

1866ರಲ್ಲಿ ಇಟಾಲಿಯನ್ ಉದ್ಯಮಿ ಸಿಗ್ನರ್ ಡಿ ವೆಚ್ಚಿ ಕೆಂಗೇರಿಯಲ್ಲಿ ರೇಷ್ಮೆ ಫಿಲೇಚರ್ ಘಟಕ ಸ್ಥಾಪಿಸಿದರು. ನಂತರ 1896ರಲ್ಲಿ ಜೆಮ್ ಸೆಟ್ಜಿ ಟಾಟಾ ಅವರು ಮೈಸೂರಿನ ದಿವಾನ್ ಶೇಷಾದ್ರಿ ಅಯ್ಯರ್ ಅವರನ್ನು ಭೇಟಿಯಾಗಿ ಬಸವನಗುಡಿಯಲ್ಲಿ ಟಾಟಾ ಸಿಲ್ಕ್ ಫಾರ್ಮ್ ಸ್ಥಾಪಿಸಿದರು. ಜಪಾನಿ ತಜ್ಞರ ನೇತೃತ್ವದಲ್ಲಿ ರೈತರಿಗೆ ತರಬೇತಿ ನೀಡಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಸುವರ್ಣ ಯುಗ (1912):

ನಿಜವಾದ ಕ್ರಾಂತಿ 1912ರಲ್ಲಿ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಿಟಿಷ್ ರಾಜಮನೆತನದ ರೇಷ್ಮೆ ವಸ್ತ್ರಗಳನ್ನು ನೋಡಿ ಆಕರ್ಷಿತರಾಗಿ, ಸ್ವಿಟ್ಜರ್ಲೆಂಡ್‌ನಿಂದ 32 ಪವರ್ ಲೂಮ್‌ಗಳನ್ನು ತರಿಸಿ ಮೈಸೂರು ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಸ್ಥಾಪಿಸಿದರು. ಆರಂಭದಲ್ಲಿ ಇದು ರಾಜಮನೆತನ ಮತ್ತು ಅರಮನೆ ಸೈನ್ಯಕ್ಕೆ ಬಟ್ಟೆ ತಯಾರಿಸುತ್ತಿತ್ತು.

ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಇಂದಿನ ಹೆಮ್ಮೆ.1980ರಲ್ಲಿ ಈ ಕಾರ್ಖಾನೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (KSIC) ವಶಕ್ಕೆ ಬಂತು. 2005ರಲ್ಲಿ ಮೈಸೂರು ಸಿಲ್ಕ್ ಭಾರತದಲ್ಲೇ ಮೊದಲ ಜಿ ಐ ಟ್ಯಾಗ್ ಪಡೆದ ರೇಷ್ಮೆ ಉತ್ಪನ್ನವಾಯಿತು. ಅಂದರೆ ಮೈಸೂರಿನಲ್ಲಿ ತಯಾರಾದ ಶುದ್ಧ ರೇಷ್ಮೆಗೆ ಮಾತ್ರ ಈ ಹೆಸರು ಬಳಸಬಹುದು.

ಆಧಾರ ಸಹಿತ ಅಂಕಿ-ಅಂಶಗಳು:

ಕರ್ನಾಟಕ ದೇಶದ 70% ಕಚ್ಚಾ ರೇಷ್ಮೆ ಮತ್ತು 45% ಮಲ್ಬರಿ ರೇಷ್ಮೆ ಉತ್ಪಾದಿಸುತ್ತದೆ. 9,000 ಮೆಟ್ರಿಕ್ ಟನ್ ಮಲ್ಬರಿ ರೇಷ್ಮೆ ಉತ್ಪಾದನೆ. ರಾಮನಗರದ ಸರ್ಕಾರಿ ಕೋಶ ಮಾರುಕಟ್ಟೆ ಏಷ್ಯಾದ ಅತಿದೊಡ್ಡ ಕೋಶ ಮಾರುಕಟ್ಟೆ. ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ತಿಂಗಳಿಗೆ 35,000 ಮೀಟರ್, ವರ್ಷಕ್ಕೆ 4,25,000 ಮೀಟರ್ ಶುದ್ಧ ರೇಷ್ಮೆ ಬಟ್ಟೆ ತಯಾರಿಸುತ್ತದೆ.

ಪ್ರತಿ ಮೈಸೂರು ಸಿಲ್ಕ್ ಸೀರೆಯಲ್ಲಿ 0.65% ಚಿನ್ನ ಮತ್ತು 65% ಬೆಳ್ಳಿ ಇರುವ ನಿಜವಾದ ಚಿನ್ನದ ಜರಿ ಇರುತ್ತದೆ. ಬೆಲೆ ರೂ. 16,000 ನಿಂದ 3 ಲಕ್ಷ ರೂ. ವರೆಗೆ. ಇಂದು ಟಿ.ನರಸೀಪುರದಲ್ಲಿ ಕೋಶದಿಂದ ನೂಲು, ಮೈಸೂರಿನಲ್ಲಿ ನೇಯ್ಗೆ ಶತಮಾನದ ಪರಂಪರೆ ಮುಂದುವರಿದಿದೆ.

ಟಿಪ್ಪುವಿನ ಕನಸು, ಒಡೆಯರ ದೂರದೃಷ್ಟಿ, ಟಾಟಾ ರ ತರಬೇತಿ ಈ ಮೂವರಿಂದ ಮೈಸೂರು ಇಂದು ವಿಶ್ವದ ರೇಷ್ಮೆ ರಾಜಧಾನಿ. ಈ ರಾಷ್ಟ್ರೀಯ ರೇಷ್ಮೆ ದಿನದಂದು ನಾವು ಕೊಳ್ಳುವ ಪ್ರತಿ ಮೈಸೂರು ಸಿಲ್ಕ್ ಸೀರೆ, ಪ್ರತಿ ನೂಲಿನ ಹಿಂದೆ 250 ವರ್ಷದ ಮೈಸೂರು ರೇಷ್ಮೆ ಕ್ರಾಂತಿಯ ಕಥೆ ಇದೆ.

ಬರಹ: ಕೆ ಎಸ್ ಜಯಶಂಕರ್