ಸಿಮ್‌ ಕಾರ್ಡ್ ದುರ್ಬಳಕೆ ಮಾಡಿದರೆ ಕಠಿಣ ಕ್ರಮ : ₹50 ಲಕ್ಷದವರೆಗೆ ದಂಡ, 3 ವರ್ಷ ಜೈಲು

0
45

ನವದೆಹಲಿ : ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್‌ ಕಾರ್ಡ್ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ ಅಥವಾ ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಯಲ್ಲಿ ಬದಲಾವಣೆ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.

ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಇಂತಹ ನಿಯಮ ಉಲ್ಲಂಘನೆಗಳಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.

ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಪರ್ಕವನ್ನು ಬೇರೆಯವರಿಗೆ ಬಳಸಲು ನೀಡುವುದರಿಂದ, ಆ ಸಂಖ್ಯೆಯನ್ನು ಸೈಬರ್ ವಂಚನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿದ ಸಂದರ್ಭದಲ್ಲಿ ಮೂಲ ಚಂದಾದಾರರೂ ಕಾನೂನು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಹೆಸರಿನಲ್ಲಿರುವ ಸಿಮ್‌ ಕಾರ್ಡ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ಬಳಸಲು ನೀಡದಂತೆ ಇಲಾಖೆ ಸೂಚಿಸಿದೆ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಪರಿಶೀಲಿಸಿ

ಕೆಲವೊಮ್ಮೆ ವ್ಯಕ್ತಿಯ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಅವರ ಗಮನಕ್ಕೆ ಬಾರದ ರೀತಿಯಲ್ಲಿ ಮೊಬೈಲ್ ಸಂಪರ್ಕಗಳನ್ನು ಪಡೆಯುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಖ್ಯೆಗಳು ನೋಂದಣಿಯಾಗಿವೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವಂತೆ ದೂರಸಂಪರ್ಕ ಇಲಾಖೆ ಸಲಹೆ ನೀಡಿದೆ.

ತಮ್ಮ ಹೆಸರಿನಲ್ಲಿ ಅನಧಿಕೃತವಾಗಿ ಮೊಬೈಲ್ ಸಂಖ್ಯೆ ನೋಂದಣಿಯಾಗಿರುವುದು ಕಂಡುಬಂದರೆ, ಅದನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ಸಿಮ್ ಹಂಚಿಕೊಳ್ಳುವುದರಿಂದ ಕಾನೂನು ಸಂಕಷ್ಟ

ಸ್ವಂತ ಹೆಸರಿನಲ್ಲಿ ಪಡೆದ ಸಿಮ್‌ ಕಾರ್ಡ್ ಅನ್ನು ಸ್ನೇಹಿತರು, ಪರಿಚಿತರು ಅಥವಾ ಇತರರಿಗೆ ಬಳಸಲು ನೀಡುವುದರಿಂದ ಮುಂದೆ ಆ ಸಂಖ್ಯೆಯ ಮೂಲಕ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಬಹುದು. ಆದ್ದರಿಂದ ತಮ್ಮ ಹೆಸರಿನ ಮೊಬೈಲ್ ಸಂಪರ್ಕವನ್ನು ತಾವೇ ಬಳಸಬೇಕು ಹಾಗೂ ಅಪರಿಚಿತರು ಅಥವಾ ಇತರರಿಗೆ ನೀಡಬಾರದು ಎಂದು ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಮೊಬೈಲ್ ಸಂಖ್ಯೆಗಳ ದುರ್ಬಳಕೆ ಹಾಗೂ ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವ ಸಂಪರ್ಕಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.