ಯುಎಇಯಲ್ಲಿ ಸಂಭ್ರಮದಿಂದ ನೆರವೇರಿದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಗಣೇಶೋತ್ಸವ

0
9

ಯುಎಇಯಲ್ಲಿ ಕನ್ನಡ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ವತಿಯಿಂದ ಆಯೋಜಿಸಿದ್ದ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಅಜ್ಮಾನ್‌ನ ಜುರ್ಫ್‌ನಲ್ಲಿರುವ ಇಂಡಿಯನ್ ಅಸೋಸಿಯೇಷನ್ ಹಾಲ್‌ನಲ್ಲಿ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.

ಗಣಹೋಮ, ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ವೇದಮೂರ್ತಿಗಳಾದ ಸಾಂತೂರು ಲಕ್ಷ್ಮೀಕಾಂತ್ ಭಟ್ ಮತ್ತು ರಾಜೇಶ್ ಪ್ರಸಾದ್ ಅಡಿಗ ಅವರ ಪೌರೋಹಿತ್ಯದಲ್ಲಿ ನಡೆದವು.

ಕರ್ನಾಟಕದ ಮಾಜಿ ಸಚಿವ ಹಾಗೂ ಉದ್ಯಮಿ ಕೃಷ್ಣ ಜೆ. ಪಾಲೇಮಾರ್, ಕರ್ನಾಟಕ ಸಂಘ ಅಬುಧಾಬಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಸಮಾಜಸೇವಕ ರವಿ ಕಟಪಾಡಿ ಹಾಗೂ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮಹೇಶ್ ಚಂದ್ರಗಿರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ವೋತ್ತಮ ಶೆಟ್ಟಿ ಹಾಗೂ ಸಮಾಜಸೇವಕ ರವಿ ಕಟಪಾಡಿ ಅವರನ್ನು ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ರವಿ ಕಟಪಾಡಿ ಅವರು ಕಳೆದ 14 ವರ್ಷಗಳಿಂದ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ವೇಷಧಾರಣೆಗಳ ಮೂಲಕ ಹಣ ಸಂಗ್ರಹಿಸಿ ಬಡ ಹಾಗೂ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅವರ ತಂಡ ₹1.85 ಕೋಟಿ ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾಗಿದೆ ಎಂದು ತಿಳಿಸಲಾಯಿತು.