ಕರಾವಳಿಗೆ ಮತ್ತೆ ಮಳೆರಾಯನ ಆಗಮನ: ಬಿಸಿಲಿನ ಬೇಗೆಗೆ ತಂಪಿನ ಸಿಂಚನ

0
40

ಮಂಗಳೂರು : ಉರಿ ಬಿಸಿಲಿನ ಶಾಖಕ್ಕೆ ಬೆಂದು ಹೋಗಿದ್ದ ಕರಾವಳಿಗರಿಗೆ ಮಳೆರಾಯ ಮತ್ತೆ ತಂಪಿನ ಸಿಂಚನ ನೀಡಿದ್ದಾನೆ. ಕರಾವಳಿ ಕರ್ನಾಟಕದಲ್ಲಿ ಸೆ.24ರಂದು ಭಾರಿ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆಯಿದ್ದು, ಸೆ.25ರವರೆಗೂ ಗುಡುಗು-ಮಿಂಚಿನ ವಾತಾವರಣ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೆ.26ರಿಂದ ಕರಾವಳಿ ಭಾಗದಲ್ಲಿ ಯಾವುದೇ ಮಳೆ ಎಚ್ಚರಿಕೆ ಇಲ್ಲದಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಸೇರಿದಂತೆ ಕರಾವಳಿ ಭಾಗದ ಹಲವೆಡೆ ಉತ್ತಮ ಮಳೆಯಾಗಿದ್ದು, ಹಲವು ದಿನಗಳಿಂದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದೆ. ವಾಯುಭಾರ ಕುಸಿತದ ಪರಿಣಾಮವಾಗಿ ಉಂಟಾಗಿದ್ದ ಮಳೆ ಚಟುವಟಿಕೆ ನಿಧಾನವಾಗಿ ಶಿಥಿಲಗೊಳ್ಳುತ್ತಿದ್ದಂತೆ ಸೆ.26ರಿಂದ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಕೆಲವೆಡೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಕೊಡಗು–ಹಾಸನ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಘಟ್ಟ ಪ್ರದೇಶಗಳಲ್ಲಿಯೂ ಮಳೆಯ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಮತ್ತೆ ಪೂರ್ವದಿಂದ ಗುಡುಗು ಸಹಿತ ಮಳೆ ಚಟುವಟಿಕೆ ಆರಂಭವಾಗುವ ಸಾಧ್ಯತೆಯ ಬಗ್ಗೆಯೂ ಹವಾಮಾನ ಮುನ್ಸೂಚನೆಗಳಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳ ಮಳೆ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹವಾಮಾನ ಇಲಾಖೆಯ ಅಧಿಕೃತ ಮುನ್ಸೂಚನೆಗಳನ್ನು ಗಮನಿಸುವುದು ಅಗತ್ಯವಾಗಿದೆ.