ಚೇತನಾ ವಿಶೇಷ ಶಾಲೆಯಲ್ಲಿ ಯೆನಪೋಯ ಮೆಡಿಕಲ್‌ ಕಾಲೇಜು ಇವರ ಸಹಯೋಗದೊಂದಿಗೆ ಉಚಿತ ವಾಕ್ – ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

0
11

ಕಾರ್ಕಳ: ವಿಶೇಷಚೇತನರಿಗಾಗಿ ನೂತನ ಯೋಜನೆಗಳನ್ನು ಹಮ್ಮಿಕೊಂಡು ಕಳೆದ 23 ವರ್ಷಗಳಿಂದ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಚೇತನಾ ವಿಶೇಷ ಶಾಲೆ, ಕಾರ್ಕಳ ಹಾಗೂ ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಇವರ ಸಹಯೋಗದಲ್ಲಿ ಕಳೆದ ಐದು ವರ್ಷಗಳಿಂದ ವಾಕ್ ಹಾಗೂ ಶ್ರವಣದೋಷ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಸೇವಾ ಕ್ಷೇತ್ರದ ಮುಂದುವರಿದ ಅಂಗವಾಗಿ ಸೆ.30ರಂದು ಬುಧವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಚೇತನಾ ವಿಶೇಷ ಶಾಲೆ, ಕಾರ್ಕಳದಲ್ಲಿ ಉಚಿತ ವಾಕ್–ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ ಎಸ್. ಎಲ್. ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ತಜ್ಞರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಹಾಗೂ ಅಗತ್ಯ ಚಿಕಿತ್ಸಾ ಸಲಹೆಗಳನ್ನು ನೀಡಲಿದ್ದಾರೆ.

ವಾಕ್ ಮತ್ತು ಶ್ರವಣದೋಷ ಹೊಂದಿರುವ ಎಲ್ಲಾ ವಯೋಮಾನದವರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಿಶೇಷವಾಗಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶ್ರವಣದೋಷವುಳ್ಳ ಮಕ್ಕಳಿಗೆ ಅರ್ಹತೆಗೆ ಅನುಗುಣವಾಗಿ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಸೇರಿದಂತೆ ಲಭ್ಯವಿರುವ ಇತರ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಶ್ರವಣದೋಷ ಮತ್ತು ವಾಕ್ ಸಮಸ್ಯೆ ಹೊಂದಿರುವವರು ಹಾಗೂ ಅವರ ಪೋಷಕರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳುವಂತೆ ಚೇತನಾ ವಿಶೇಷ ಶಾಲೆಯ ಆಡಳಿತ ಮಂಡಳಿ ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ವತಿಯಿಂದ ಮನವಿ ಮಾಡಲಾಗಿದೆ.