ಉಡುಪಿ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ ಎಂಜಿನಿಯರ್ಸ್‌ ಡೇ

0
30

ನಿಷ್ಕಾಮ ಕರ್ಮದೊಂದಿಗೆ ಗುಣಮಟ್ಟದ ಕಾರ್ಯಕ್ಕೆ ಆದ್ಯತೆ ಅವಶ್ಯ: ಡಾ| ರಾಘವೇಂದ್ರ ಕೆ. ಹೊಳ್ಳ

ಉಡುಪಿ : ಎಂಜಿನಿಯರ್‌ಗಳ ಜೀವನ ಪರಿಪೂರ್ಣತೆಯನ್ನು ಪಡೆಯಬೇಕಾದರೆ ನಿಷ್ಕಾಮ ಕರ್ಮದ ಮನೋಭಾವ ಬೆಳೆಸಿಕೊಳ್ಳಬೇಕು. ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯಾಗಿ ಸ್ವೀಕರಿಸಬೇಕು. ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನ ಹಾಗೂ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಕಾರ್ಯನಿರ್ವಹಣೆಗೆ ಆದ್ಯತೆ ನೀಡಿದಾಗ ವೃತ್ತಿಪರ ಪ್ರಗತಿಯೊಂದಿಗೆ ಸಮಾಜಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ.

ಎಂದು ಎಂಐಟಿ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಆ್ಯಂಡ್‌ ವೆಲ್ಫೇರ್‌ ವಿಭಾಗದ ಅಸೋಸಿಯೇಟ್‌ ಡೈರೆಕ್ಟರ್‌ ಡಾ| ರಾಘವೇಂದ್ರ ಕೆ. ಹೊಳ್ಳ ಅಭಿಪ್ರಾಯಪಟ್ಟರು.
ಉಡುಪಿ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ ವತಿಯಿಂದ ಹೊಟೇಲ್‌ ಕಿದಿಯೂರಿನ ಪ್ರಥಮ ಮಹಡಿಯಲ್ಲಿರುವ ಅನಂತ ಶಯನ ಹಾಲ್‌ನಲ್ಲಿ ಬುಧವಾರ ಆಚರಿಸಲಾದ ಎಂಜಿನಿಯರ್ಸ್‌ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂಜಿನಿಯರ್‌ಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ಹಿಂದೆ ಸರಿಯದೆ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು. ತಾಂತ್ರಿಕ ಜ್ಞಾನದ ಜತೆಗೆ ಸಾಮಾಜಿಕ ಕಳಕಳಿ, ಸೇವಾ ಮನೋಭಾವ,  ಕರ್ತವ್ಯನಿಷ್ಠೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶ, ಶಿಸ್ತು, ಕಾರ್ಯನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದವರು ಆಶಿಸಿದರು.

ಮೆಸ್ಕಾಂ ಉಡುಪಿ ಉಪವಿಭಾಗದ ಎಇಇ ಎಸ್‌. ಗಣರಾಜ ಭಟ್‌ ಅವರು, ಎಂಜಿನಿಯರ್‌ಗಳು ವೃತ್ತಿ ಜೀವನದಲ್ಲಿ ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಂಡು ತಮ್ಮ ಕಾರ್ಯದಲ್ಲಿ ಸಂಪೂರ್ಣ ಮುತುವರ್ಜಿ ಹಾಗೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು. ಗುಣಮಟ್ಟದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಕೈಗೊಳ್ಳಬೇಕು. ವೃತ್ತಿಪರ ಜವಾಬ್ದಾರಿಯ ಜತೆಗೆ ಸಮಾಜದ ಬಗ್ಗೆ ಕಳಕಳಿ ಹೊಂದಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ ಎಂ.ವಿಶ್ವೇಶ್ವರಯ್ಯ ನವರ ಕುರಿತು ಎಂಜಿನಿಯರ್ ಪಟ್ಟಾಭಿರಾಮ್ ಆಚಾರ್ಯ ಮಾತನಾಡಿದರು. ಕೋಶಾಧಿಕಾರಿ  ಗಣೇಶ್‌ ಎಸ್  ಸಾಲ್ಯಾನ್‌ , ಸಂಘದ ಸದಸ್ಯರು, ಗಙ್ಯರು ಉಪಸ್ಥಿತರಿದ್ದರು.

ಅವಿನಾಶ್ ಕಾಮತ್ ನಿರೂಪಿಸಿದರು. ಉಪಾಧ್ಯಕ್ಷ ಭರತ್ ಭೂಷಣ್, ಆರ್ಕಿಟೆಕ್ಟ್ ಪವಿತ್ರಾ ಶೆಣೈ, ಎಂಜಿನಿಯರ್ ಗಣೇಶ್ ಬೈಲೂರು, ಪುನೀತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಹರೀಶ್‌ ಕುಮಾರ್‌ ವಂದಿಸಿದರು.

ಮನೋರಂಜನೆ ಕಾರ್ಯಕ್ರಮ ಅಂಗವಾಗಿ ವಿದುಷಿ ಡಾ. ಮಂಜರೀಚಂದ್ರ ಪುಷ್ಪರಾಜ್ ಸಾರಥ್ಯದ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿ ಅವರಿಂದ ನೃತ್ಯ, ಅಸೋಸಿಯೇಶನ್‌ ಸದಸ್ಯರಿಂದ ಕರೋಕೆ ಗಾಯನ, ದೀಕ್ಷಾ ರಾಮಕೃಷ್ಣ  , ಹರೀಶ್ ಕುಮಾರ್  ಬಳಗದ ವತಿಯಿಂದ  ಸಂಗೀತ   ಗಾಯನ ನಡೆಯಿತು.                                                                                                                                                                                                 
ಸಾಧಕರಿಗೆ ಸಮ್ಮಾನ

ಸಂಗೀತ ಕ್ಷೇತ್ರದ ವಿದುಷಿ ಸಂಗೀತಾ ಬಾಲಚಂದ್ರ ಅವರಿಗೆ ‘ಉಡುಪಿ ಕೋಗಿಲೆ’, ನೃತ್ಯ ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ಅವರಿಗೆ ‘ಕೀರ್ತನಾ ಕಲಾಶ್ರೀ’ ಹಾಗೂ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ‘ಸೇವಾ ದುರಂಧರ’ ಈಶ್ವರ ಮಲ್ಪೆ ಅವರಿಗೆ ‘ಮತ್ಸ್ಯ ರಾಜ’ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡಿ ಸಮ್ಮಾನಿಸಲಾಯಿತು.

ಸರ್ ಎಂ.ವಿಶ್ವೇಶ್ವರಯ್ಯ ನವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಸಮರ್ಪಿಸಲಾಯಿತು.                                                                                                                       
ಅಧ್ಯಕ್ಷತೆ ವಹಿಸಿ ಸ್ವಾಗತಿಸಿದ ಅಸೋಸಿಯೇಶನ್‌ ಅಧ್ಯಕ್ಷ ಕೆ. ರಂಜನ್‌ ಮಾತನಾಡಿ, ಎಂಜಿನಿಯರ್‌ಗಳು ಎದುರಿಸುವ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ, ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳಿಗೆ ಸಂಸ್ಥೆಯ ವತಿಯಿಂದ ಸದಾ ಸಹಕಾರ ಮತ್ತು ಬೆಂಬಲ ನೀಡಲು ಸಿದ್ಧರಿದ್ದೇವೆ. ಎಂಜಿನಿಯರ್‌ಗಳ ವೃತ್ತಿಪರ ಬೆಳವಣಿಗೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಅಗತ್ಯವಾದ ನೆರವು ನೀಡುವ ಮೂಲಕ ಅಭಿವೃದ್ಧಿಯ ಪಯಣದಲ್ಲಿ ಸಂಸ್ಥೆ ಸದಾ ಕೈಜೋಡಿಸಲಿದೆ ಎಂದು ಹೇಳಿದರು.