ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ರಿಕ್ಷಾಗೆ ಲಾರಿ ಡಿಕ್ಕಿ :ಚಾಲಕ ಸೇರಿದಂತೆ ಇಬ್ಬರಿಗೆ ಗಾಯ

0
55

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಗೆ ರಿಕ್ಷಾ ಪ್ರವೇಶಿಸುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಗುರುವಾರ ಬಂಟ್ವಾಳದ ಜಕ್ರಿಬೆಟ್ಟು ಬಳಿ ನಡೆದಿದೆ.

ಅಪಘಾತದಲ್ಲಿ ರಿಕ್ಷಾ ಚಾಲಕ ಜೇಮ್ಸ್ ಮಾರ್ಟಿಸ್ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಮ್ಮದ್ ಸಿನಾನ್ ಗಾಯಗೊಂಡಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬಂಟ್ವಾಳ ಪೇಟೆಯಿಂದ ಬೆಳ್ತಂಗಡಿ ಕಡೆಗೆ ರಿಕ್ಷಾದಲ್ಲಿ ಟಯರ್‌ಗಳನ್ನು ಸಾಗಿಸಲಾಗುತ್ತಿತ್ತು. ಟಯರ್ ಸಾಗಿಸಲು ರಿಕ್ಷಾದ ಹಿಂಬದಿಯ ಸೀಟನ್ನು ಮಡಚಿ ಟಯರ್‌ಗಳನ್ನು ತುಂಬಲಾಗಿತ್ತು. ಟಯರ್‌ಗಳ ಸಾಗಣೆಯ ಜವಾಬ್ದಾರಿ ಹೊಂದಿದ್ದ ಮಹಮ್ಮದ್ ಸಿನಾನ್ ಅವರು ಚಾಲಕ ಜೇಮ್ಸ್ ಮಾರ್ಟಿಸ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು.

ಜಕ್ರಿಬೆಟ್ಟು ಬಳಿ ರಿಕ್ಷಾ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಸಂದರ್ಭ, ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದಲ್ಲಿದ್ದ ಇಬ್ಬರಿಗೂ ಗಾಯಗಳಾಗಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.