-ಮಂದಾರ ರಾಜೇಶ್
ಬೆಂಗಳೂರು: ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 30, 2022ರಂದು ಚಾಮರಾಜನಗರದ ಗುಂಡ್ಲುಪೇಟೆಗೆ ಪಾದಾರ್ಪಣೆ ಮಾಡಿದ ನೆನಪಿಗಾಗಿ ಶಿಕಾರಿಪುರದಲ್ಲಿ ‘ಭಾರತ್ ಜೋಡೋ ಯಾತ್ರೆ-2’ ಅನ್ನು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇಶದ ಜನರನ್ನು ಒಗ್ಗೂಡಿಸುವುದು, ಪರಸ್ಪರ ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುವುದರ ಜೊತೆಗೆ ಜನರ ಸಮಸ್ಯೆಗಳನ್ನು ಆಲಿಸಿ ಅವರ ಆಶಯಗಳಿಗೆ ಧ್ವನಿಯಾಗುವುದು ಈ ಯಾತ್ರೆಯ ಪ್ರಮುಖ ಉದ್ದೇಶ ಎಂದರು.
ಶಿಕಾರಿಪುರದಲ್ಲಿ ನಡೆಸಲು ಉದ್ದೇಶಿಸಿರುವ ಈ ಯಾತ್ರೆಯ ರೂಪುರೇಷೆಗಳ ಕುರಿತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಯೋಗೀಶ್ ಅವರೊಡನೆ ಚರ್ಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹಾಗೂ ಜಿಲ್ಲೆಯ ಇತರೆ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಯಾತ್ರೆಯ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಮಹತ್ವದ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಶಿಕಾರಿಪುರ ಗ್ಯಾರಂಟಿ ಸಮಿತಿ ಅನುಷ್ಠಾನ ಯೋಜನಾ ಅಧ್ಯಕ್ಷರಾದ ನಾಗರಾಜ್ ಗೌಡ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ಶಾಂತವೀರ ನಾಯಕ್, ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ರಮೇಶ್ ಶಂಕರಘಟ್ಟ, ಶಿವಮೊಗ್ಗ ಉತ್ತರ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅನಿತಾ ಕುಮಾರಿ ಮತ್ತು ಮಧುಕುಮಾರ್ ಉಪಸ್ಥಿತರಿದ್ದರು ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ರಮೇಶ್ ಶಂಕರಘಟ್ಟ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

