
ಪುತ್ತೂರು: ಅಕ್ಷಯ ಕಾಲೇಜಿನ ಮಾನವ ಹಕ್ಕುಗಳ ಕ್ಲಬ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ‘ಗ್ರಾಹಕ ಹಕ್ಕುಗಳ ರಕ್ಷಣೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲ ಚಿದಾನಂದ ಬೈಲಾಡಿ ಅವರು ಗ್ರಾಹಕರ ಮೂಲಭೂತ ಹಕ್ಕುಗಳಾದ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕುಗಳ ಕುರಿತು ವಿವರಿಸಿದರು. ಕಲಬೆರಕೆ ಹಾಗೂ ನಕಲಿ ವಸ್ತುಗಳಿಂದ ರಕ್ಷಣೆ ಪಡೆಯುವ ವಿಧಾನ ಮತ್ತು ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ ಪ್ರಕ್ರಿಯೆಯ ಬಗ್ಗೆಯೂ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ಪಕ್ಕಳ ಮಾತನಾಡಿ, ದೈನಂದಿನ ಜೀವನದಲ್ಲಿ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಕಳಪೆ ಗುಣಮಟ್ಟದಿಂದ ಗ್ರಾಹಕರು ಮೋಸ ಹೋಗುವ ಸಾಧ್ಯತೆಯಿದ್ದು, ಸೂಕ್ತ ಕಾನೂನು ಅರಿವಿನ ಕೊರತೆಯಿಂದ ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕ ರಕ್ಷಣಾ ಕಾಯ್ದೆಯ ಕುರಿತು ಅರಿವು ಹೊಂದುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಮುಖ್ಯಸ್ಥ ಅಶೋಕ ರೈ, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ., ಮಾನವ ಹಕ್ಕುಗಳ ಕ್ಲಬ್ ಸಂಯೋಜಕಿ ರ್ಶಿತಾ ಎನ್.ಎಂ. ಉಪಸ್ಥಿತರಿದ್ದರು. ಅಂತಿಮ ಪದವಿ ವಿದ್ಯಾರ್ಥಿನಿ ಕೋಮಲಾಕ್ಷಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಗರ್ವ ವಂದಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
