ಕುಂದಾಪುರದಲ್ಲಿ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಕ್ರಿಯೆ

0
39

ಕುಂದಾಪುರ : ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಗ್ಗೆ ಹುಟ್ಟೂರಿಗೆ ತಲುಪಿತು. ಬಳಿಕ ಸಿ.ಎಸ್.ಐ. ಕೃಪಾ ದೇವಾಲಯದ ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶಾರ್ಜಾದಿಂದ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಸೆ.25ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಹೊನ್ನನಕೇರಿಯಲ್ಲಿರುವ ಅವರ ಮನೆಗೆ ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಬೆಳಗ್ಗೆ ಸುಮಾರು 10.30ಕ್ಕೆ ಶಾಸ್ತ್ರೀ ವೃತ್ತದ ಬಳಿಯ ಸಿ.ಎಸ್.ಐ. ಕೃಪಾ ದೇವಾಲಯದ ಸಮಾಧಿ ಸ್ಥಳದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಲ್ವಿನ್ ಅವರ ತಂದೆ-ತಾಯಿಯ ಸಮಾಧಿಯ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.

ಸಿ.ಎಸ್.ಐ. ಕೃಪಾ ಚರ್ಚ್ ಧರ್ಮಗುರು ರೆವರೆಂಡ್ ಫಾ. ಇಮಾನ್ಯವಲ್ ಜಯಕರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಏರಿಯಾ ಅಧ್ಯಕ್ಷ ರೆವ. ಕಿಶೋರ್ ಕುಮಾರ್, ರೆವ. ಎಡ್ವಿನ್ ಜೋಸೆಫ್, ಸಿಎಎಸ್‌ಐ ಡಯಾಸಿಸ್ ಕೋಶಾಧಿಕಾರಿ ಐವಾನ್ ಸೋನ್ಸ್, ರೆವ. ಪ್ರವೀಣ್ ಮಾಬೆನ್, ಬಸ್ರೂರು ಎಲಿಜಬೆತ್ ಚರ್ಚ್‌ನ ರೆವ. ಫಾ. ರವಿ ಶಶಿಕಲಾ ಹಾಗೂ ರೆವ. ಸ್ಟೀವನ್ ಸರ್ವೋತ್ತಮ್ ಪಾಲ್ಗೊಂಡರು.

ಅಂತ್ಯಕ್ರಿಯೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಮಾಜಿ ಸದಸ್ಯರಾದ ಪ್ರಭಾಕರ್, ರಾಜೇಶ್ ಕಾವೇರಿ, ರತ್ನಾಕರ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ ಹೆಗ್ಡೆ, ವಿಜಯ್ ಎಸ್. ಪೂಜಾರಿ, ವಿ. ನರಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಎಂ.ಎ. ಗಫೂರ್, ಪ್ರಶಾಂತ್, ಆಕಾಶ್, ಪ್ರಮೀಳಾ ಜತ್ತನ್ ಹಾಗೂ ಉದಯ್ ಅವರು ಶುಕ್ರವಾರ ಮುಂಜಾನೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಪಾರ್ಥಿವ ಶರೀರವನ್ನು ಕಾನೂನುಬದ್ಧವಾಗಿ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.