ಬೆಂಗಳೂರು : ಹಾಲಿನಿಂದ ಪಡೆಯದ ಪನೀರ್ ಅನಲಾಗ್ ಉತ್ಪನ್ನಗಳನ್ನು ‘ಪನೀರ್’ ಎಂದು ಮಾರಾಟ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ.
ಸೆ.24ರಂದು ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ, ಹಾಲಿನಿಂದ ಪಡೆಯದ ಘಟಕಗಳಿಂದ ತಯಾರಿಸಲಾದ ಉತ್ಪನ್ನಗಳಿಗೆ ‘ಪನೀರ್’ ಎಂಬ ಹೆಸರನ್ನು ಬಳಸುವುದನ್ನು ನಿರ್ಬಂಧಿಸುವ ಪ್ರಸ್ತಾವನೆ ಮಾಡಲಾಗಿದೆ. ಉತ್ಪನ್ನದ ನಿಜವಾದ ಸ್ವರೂಪದ ಕುರಿತು ಗ್ರಾಹಕರಲ್ಲಿ ಗೊಂದಲ ಉಂಟಾಗದಂತೆ ಸೂಕ್ತ ಹೆಸರು ಹಾಗೂ ಲೇಬಲಿಂಗ್ ನಿಯಮಗಳನ್ನು ಜಾರಿಗೆ ತರಲು FSSAI ಮುಂದಾಗಿದೆ.
ಈ ಹಿಂದೆ ಕೂಡ FSSAI, ಹಾಲಿನ ಉತ್ಪನ್ನಗಳಿಗೆ ಪರ್ಯಾಯವಾಗಿ ಬಳಸುವ ಅನಲಾಗ್ ಉತ್ಪನ್ನಗಳನ್ನು ಮೂಲ ಹಾಲಿನ ಉತ್ಪನ್ನಗಳ ಹೆಸರಿನಲ್ಲಿ ಮಾರಾಟ ಮಾಡದಂತೆ ಸೂಚಿಸಿತ್ತು. ವಿಶೇಷವಾಗಿ ಚೀಸ್ ಅನಲಾಗ್ ಉತ್ಪನ್ನಗಳನ್ನು ‘ಪನೀರ್’ ಎಂದು ಮಾರಾಟ ಮಾಡುವುದು ನಿಯಮ ಉಲ್ಲಂಘನೆಯಾಗುತ್ತದೆ ಎಂದು 2026ರ ಏಪ್ರಿಲ್‌ನಲ್ಲಿ ಸಾರ್ವಜನಿಕ ಸೂಚನೆ ನೀಡಲಾಗಿತ್ತು.
ಹೊಸ ಕರಡು ನಿಯಮಗಳ ಮೂಲಕ ಹಾಲಿನಿಂದ ತಯಾರಿಸಲಾದ ನೈಜ ಪನೀರ್ ಮತ್ತು ಹಾಲಿನಿಂದ ಪಡೆಯದ ಅನಲಾಗ್ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವ ಉದ್ದೇಶ ಹೊಂದಲಾಗಿದೆ.
ಕರಡು ನಿಯಮಗಳ ಕುರಿತು ಸಾರ್ವಜನಿಕರು ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ನಿಯಮಗಳನ್ನು ರೂಪಿಸಲಾಗುವುದು. ಹೀಗಾಗಿ ಸದ್ಯ ಇದು ಕರಡು ಪ್ರಸ್ತಾವನೆಯಾಗಿದ್ದು, ಅಂತಿಮ ನಿಯಮ ಜಾರಿಗೆ ಬಂದಿಲ್ಲ.

