ಕಾಪು : ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡ ಪೋಸ್ಟ್ ವಿಚಾರವಾಗಿ ಯುವಕನೊಬ್ಬನಿಗೆ ₹25 ಲಕ್ಷ ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿ, ಬಳಿಕ ₹5 ಲಕ್ಷ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಘಟನೆಯಿಂದ ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ದೂರು ನೀಡಲಾಗಿದೆ.
ಉಳಿಯಾರಗೋಳಿ ಗ್ರಾಮದ ರಿಜ್ವಾನ್ ಹಾಜಿ ಮೊಹಮ್ಮದ್ (23) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪೊಲಿಪುವಿನ ಬೈಕ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ರಿಜ್ವಾನ್, ಸೆ.10ರಂದು ಕಾಪು ಮಸೀದಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ಪ್ರಕಟವಾಗಿದ್ದ ಪತ್ರಿಕಾ ವರದಿಯ ತುಣುಕನ್ನು ‘ಈದ್ ಮೀಲಾದ್ ರ‍್ಯಾಲಿ’ ಸ್ನೇಹಿತರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೆ.21ರಂದು ವಕೀಲರ ಮೂಲಕ ನೋಂದಾಯಿತ ಅಂಚೆಯಲ್ಲಿ ರಿಜ್ವಾನ್ ಅವರಿಗೆ ನೋಟಿಸ್ ಬಂದಿದ್ದು, ಅವಹೇಳನಕಾರಿ ಪೋಸ್ಟ್ ಹಾಕಿ ಅಮೀರ್ ಹಂಝ ರಜಬ್ ಅವರ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಕ್ಷಮೆಯಾಚಿಸುವಂತೆ ಹಾಗೂ ₹25 ಲಕ್ಷ ಮಾನನಷ್ಟ ಪರಿಹಾರ ನೀಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.
ಸೆ.22ರಂದು ಸಂಜೆ ಪೊಲಿಪುವಿನಲ್ಲಿ ಟೈಯರ್ ಅಂಗಡಿಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಯ ಬಳಿ ಕಾರಿನಲ್ಲಿ ಬಂದ ಇಮ್ತಿಯಾಜ್ ಮತ್ತು ಅಮೀರ್ ಹಂಝ ಅವರು ರಿಜ್ವಾನ್ ಅವರನ್ನು ತಡೆದು, ವಾಟ್ಸ್‌ಆ್ಯಪ್ ಪೋಸ್ಟ್ ವಿಚಾರವಾಗಿ ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಕ್ಷಮೆಯಾಚಿಸಿದರೂ, ₹25 ಲಕ್ಷದ ಬದಲಾಗಿ ಸ್ಥಳದಲ್ಲೇ ₹5 ಲಕ್ಷ ನೀಡಿದರೆ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಹಾಗೂ ಹಣ ನೀಡದಿದ್ದರೆ ನ್ಯಾಯಾಲಯದ ಮೂಲಕ ₹25 ಲಕ್ಷ ವಸೂಲಿ ಮಾಡುವುದಾಗಿ ಮತ್ತು ಕಾಪುವಿನಲ್ಲಿ ಜೀವಂತವಾಗಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಮಾನಸಿಕವಾಗಿ ನೊಂದಿದ್ದ ರಿಜ್ವಾನ್, ಹಣ ಹೊಂದಿಸಲಾಗದೇ ಹಾಗೂ ಆರೋಪಿಗಳ ಕಿರುಕುಳದಿಂದಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎನ್ನಲಾಗಿದೆ. ಸೆ.23ರಂದು ರಾತ್ರಿ ಕಾಪು ಪೇಟೆಯ ಅಂಗಡಿಯೊಂದರಿಂದ ಫ್ಲೋರ್ ಕ್ಲೀನರ್ ಖರೀದಿಸಿ, ಕಾಪುವಿನ ಕಾಂಚನ್ ಮೂಲಸ್ಥಾನದ ಬಳಿ ಸೇವಿಸಿ ಬಳಿಕ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಬಳಿಕ ತಾಯಿಗೆ ವಿಷಯ ತಿಳಿಸಿದ್ದು, ನಂತರ ಮಾಲೀಕ ಅಬ್ದುಲ್ ರಜಾಕ್ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ. ಬಳಿಕ ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಜ್ವಾನ್ ನೀಡಿದ ದೂರಿನ ಆಧಾರದ ಮೇಲೆ ಅಮೀರ್ ಹಂಝ ಹಾಗೂ ಇಸ್ಮಾಯಿಲ್ ಅವರು ₹5 ಲಕ್ಷ ನೀಡುವಂತೆ ಬೆದರಿಕೆ ಹಾಕಿದ ಆರೋಪದ ಕುರಿತು ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2026ರಲ್ಲಿ ಬಿಎನ್‌ಎಸ್ ಕಲಂ 308(4), 126(2), 351(3), 3(5)ರಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಗಳು ತನಿಖೆಯಲ್ಲಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

