ಆನ್ಲೈನ್ ಶಾಪಿಂಗ್ ಹೆಚ್ಚುತ್ತಿರುವ ಬೆನ್ನಲ್ಲೇ ಇ-ಕಾಮರ್ಸ್ ಕ್ಷೇತ್ರದಲ್ಲಿ ಗ್ರಾಹಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ‘ಗ್ರಾಹಕರ ರಕ್ಷಣೆ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026’ 2027ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಬೆಲೆ ಪಾರದರ್ಶಕತೆ, ಜಾಹೀರಾತು, ಸರ್ಚ್ ಫಲಿತಾಂಶ, ಗ್ರಾಹಕರ ದೂರುಗಳು, ಡೇಟಾ ಬಳಕೆ ಸೇರಿದಂತೆ ಹಲವು ಅಂಶಗಳಿಗೆ ನಿಯಂತ್ರಣ ತರಲಿದೆ.
ಹೊಸ ನಿಯಮಗಳ ಪ್ರಕಾರ, ಯಾವುದೇ ಉತ್ಪನ್ನದ ಬೆಲೆ ಕಡಿತವನ್ನು ಘೋಷಿಸಿದಾಗ, ಕಡಿತಗೊಳಿಸಿದ ಬೆಲೆಯ ಜತೆಗೆ ಹಿಂದಿನ ಬೆಲೆಯನ್ನೂ ಪ್ರದರ್ಶಿಸಬೇಕು. ಇಲ್ಲಿ ‘ಹಿಂದಿನ ಬೆಲೆ’ ಎಂದರೆ ರಿಯಾಯಿತಿ ಘೋಷಿಸುವುದಕ್ಕೂ ಮುನ್ನದ 30 ದಿನಗಳಲ್ಲಿ ಆ ಉತ್ಪನ್ನಕ್ಕೆ ನೀಡಲಾಗಿದ್ದ ಕನಿಷ್ಠ ಬೆಲೆ ಎಂದು ನಿಯಮದಲ್ಲಿ ವ್ಯಾಖ್ಯಾನಿಸಲಾಗಿದೆ. ಇದರಿಂದ ಗ್ರಾಹಕರು ಘೋಷಿಸಲಾದ ರಿಯಾಯಿತಿಯನ್ನು ಹೆಚ್ಚು ಸ್ಪಷ್ಟವಾಗಿ ಹೋಲಿಕೆ ಮಾಡಲು ಸಾಧ್ಯವಾಗಲಿದೆ.
ಇ-ಕಾಮರ್ಸ್ ವೇದಿಕೆಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಸರ್ಚ್ ಫಲಿತಾಂಶಗಳನ್ನು ಬದಲಾಯಿಸುವಂತಿಲ್ಲ. ಪ್ರಾಯೋಜಿತ ಉತ್ಪನ್ನಗಳ ಪಟ್ಟಿಗಳನ್ನು ಕೂಡ ಸ್ಪಷ್ಟವಾಗಿ ಗುರುತಿಸುವಂತೆ ನಿಯಮ ಮಾಡಲಾಗಿದೆ.
ಗ್ರಾಹಕರನ್ನು ತಪ್ಪು ನಿರ್ಧಾರ ಕೈಗೊಳ್ಳುವಂತೆ ಪ್ರೇರೇಪಿಸುವ ‘ಡಾರ್ಕ್ ಪ್ಯಾಟರ್ನ್’ಗಳನ್ನು ತಡೆಯಲು 2023ರ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಇ-ಕಾಮರ್ಸ್ ಸಂಸ್ಥೆಗಳು ವಾರ್ಷಿಕ ಸ್ವಯಂ ಪರಿಶೀಲನೆ ನಡೆಸಿ ಅನುಸರಣೆ ಪ್ರಮಾಣಪತ್ರವನ್ನು ಪ್ರದರ್ಶಿಸಬೇಕಾಗುತ್ತದೆ.
ಗ್ರಾಹಕರ ವೈಯಕ್ತಿಕ ಮಾಹಿತಿಯ ಬಳಕೆಯಲ್ಲೂ ಹೆಚ್ಚಿನ ಪಾರದರ್ಶಕತೆ ತರಲಾಗಿದೆ. ಮಾರ್ಕೆಟ್ಪ್ಲೇಸ್ಗಳು ಮಾರಾಟಗಾರರ ವಿವರಗಳು, ವಾಪಸ್ ಮತ್ತು ಮರುಪಾವತಿ ನೀತಿ, ವಾರಂಟಿ–ಖಾತರಿ, ವಿತರಣೆ, ಪಾವತಿ ವಿಧಾನಗಳು ಹಾಗೂ ಆಮದು ಉತ್ಪನ್ನಗಳ ಆಮದುದಾರರ ವಿವರ ಮತ್ತು ಮೂಲ ದೇಶದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಬೇಕಾಗುತ್ತದೆ.
ಇದಲ್ಲದೆ, ಇ-ಕಾಮರ್ಸ್ ಸಂಸ್ಥೆಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದುವಂತೆ ನಿಯಮಿಸಲಾಗಿದೆ. 2025ರಲ್ಲಿ NCHಗೆ ಒಟ್ಟು 17,71,622 ದೂರುಗಳು ಬಂದಿದ್ದು, ಈ ಪೈಕಿ 5,11,196 ದೂರುಗಳು, ಅಂದರೆ ಸುಮಾರು ಶೇ.29ರಷ್ಟು, ಇ-ಕಾಮರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ್ದವು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.
ಹೀಗಾಗಿ 2027ರ ಜನವರಿ 1ರಿಂದ ಆನ್ಲೈನ್ ಖರೀದಿದಾರರಿಗೆ ಉತ್ಪನ್ನದ ಬೆಲೆ, ಮಾರಾಟಗಾರ, ರಿಯಾಯಿತಿ, ಜಾಹೀರಾತು ಹಾಗೂ ದೂರು ಪರಿಹಾರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಹೊಸ ನಿಯಮಗಳ ಉದ್ದೇಶ ಇ-ಕಾಮರ್ಸ್ ವಹಿವಾಟಿನಲ್ಲಿ ಪಾರದರ್ಶಕತೆ ಮತ್ತು ಗ್ರಾಹಕರ ರಕ್ಷಣೆಯನ್ನು ಬಲಪಡಿಸುವುದಾಗಿದೆ.

