ಕುಳಾಯಿ : ತರುಣ ವೃಂದ ಮತ್ತು ಮಹಿಳಾ ವೃಂದ ವಿದ್ಯಾನಗರ ಕುಳಾಯಿ ಇದರ 56ನೇ ವಾರ್ಷಿಕೋತ್ಸವ ಮತ್ತು ಶ್ರೀ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಸುರೇಶ ಕೊಟ್ಟಾರಿ ರವರ ಉಪಸ್ಥಿತಿಯಲ್ಲಿ ಜರಗಿತ್ತು. ಮುಖ್ಯ ಅತಿಥಿಗಳಾಗಿ ದೇಜು ಶೆಟ್ಟಿ ಕುಳಾಯಿ, ಪ್ರಭಾಕರ ಕುಳಾಯಿ, ಲಕ್ಷ್ಮೀ ಚಂದ್ರಶೇಖರ ಆಚಾರ್ಯ, ಪವಿತ್ರ ನಿರಂಜನ್, ರವಿ ಗೋಮಾಡಿ ಭಾಗವಹಿಸಿದ್ದರು.
ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ರವರು ತಮ್ಮ ಭಾಷಣದಲ್ಲಿ ಈ ಕೃಷ್ಣ ವೇಷ ಸ್ಪರ್ಧೆ ಕೇವಲ ಸ್ಪರ್ಧೆಯಲ್ಲ. ಇದು ಮಕ್ಕಳಲ್ಲಿ ದೇವರ ಚಿಂತನೆಯನ್ನು ಮೂಡಿಸುವ, ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಈ ಮಕ್ಕಳನ್ನು ನಮಗೆ ಕರುಣಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸುವ ಒಂದು ಸುಂದರ ಅವಕಾಶ. ತುಂಬಾ ಎಳೆಯ ಮಕ್ಕಳಿಗೆ ಧರ್ಮ, ಸಂಸ್ಕಾರ, ದೇವರು ಎಂಬ ಪರಿಕಲ್ಪನೆ ಇನ್ನೂ ಸಂಪೂರ್ಣವಾಗಿ ಮೂಡಿರುವುದಿಲ್ಲ.
ಅವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಿ ಕಲಿಯುತ್ತಾರೆ. ಅದರಲ್ಲೂ ತಂದೆ-ತಾಯಿಯೇ ಅವರ ಮೊದಲ ಗುರುಗಳು, ಮೊದಲ ಆದರ್ಶಗಳು. ಮಕ್ಕಳು ನಾವು ಹೇಳುವುದನ್ನು ಕೇಳಿ ಕಲಿಯುವುದಕ್ಕಿಂತ, ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ. ನಾವು ಮಕ್ಕಳಿಗೆ ಸತ್ಯ ಮಾತನಾಡಿ ಎಂದು ಹೇಳಬಹುದು; ಆದರೆ ನಾವು ಸತ್ಯವಂತರಾಗಿ ಬದುಕಬೇಕು. ಹಿರಿಯರನ್ನು ಗೌರವಿಸಿ ಎಂದು ಹೇಳಬಹುದು; ಆದರೆ ನಾವು ಹಿರಿಯರನ್ನು ಗೌರವಿಸುವುದನ್ನು ಅವರು ನೋಡಬೇಕು. ದೇವರನ್ನು ಸ್ಮರಿಸಿ ಎಂದು ಹೇಳಬಹುದು; ಆದರೆ ನಮ್ಮ ಬದುಕಿನಲ್ಲಿ ದೇವರ ಸ್ಮರಣೆ ಇರುವುದನ್ನು ಮಕ್ಕಳು ಅನುಭವಿಸಬೇಕು.
ಏಕೆಂದರೆ ಮಕ್ಕಳು ಬಹಳ ಸೂಕ್ಷ್ಮಗ್ರಾಹಿಗಳು. ನಮ್ಮ ಮಾತಿಗಿಂತ ನಮ್ಮ ನಡವಳಿಕೆಯೇ ಅವರ ಮನಸ್ಸಿನಲ್ಲಿ ಆಳವಾಗಿ ಉಳಿಯುತ್ತದೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಅತ್ಯುತ್ತಮ ಮಾರ್ಗವೆಂದರೆ—ಮೊದಲು ನಾವು ಅವರ ಮುಂದೆ ಆದರ್ಶವಾಗಿ ಬದುಕುವುದು. ಇಂದು ಕೃಷ್ಣನ ವೇಷ ಧರಿಸಿರುವ ಈ ಪುಟ್ಟ ಮಕ್ಕಳು ನಾಳೆ ಕೃಷ್ಣನಂತೆ ಧೈರ್ಯಶಾಲಿಗಳಾಗಲಿ, ಬುದ್ಧಿವಂತರಾಗಲಿ, ಪ್ರೀತಿಯುಳ್ಳವರಾಗಲಿ, ಧರ್ಮದ ಹಾದಿಯಲ್ಲಿ ನಡೆಯುವವರಾಗಲಿ ಎಂಬುದು ನಮ್ಮೆಲ್ಲರ ಆಶಯವಾಗಲಿ ಎಂದು ಹೇಳಿದರು.
ತರುಣ ವೃಂದದ ಅಧ್ಯಕ್ಷರು ಯಾದವ ಶೆಟ್ಟಿಗಾರ್ ಮತ್ತು ಮಹಿಳಾ ವೃಂದದ ಅಧ್ಯಕ್ಷೆ ಶಾರದ ಪ್ರಕಾಶ್ ಕುಲಾಲ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ದಿನೇಶ ಕುಲಾಲ್ ಸ್ವಾಗತಿಸಿದ್ದು, ಬೇಬಿ ರವರುಧನ್ಯವಾದ ನೀಡಿದ್ದು ಸತೀಶ ಕುಲಾಲ್ ನಿರೂಪಣೆ ಮಾಡಿದ್ದರು.

