ರೇಷನ್ ಕಾರ್ಡ್‌ನ e-KYC ಪ್ರಕ್ರಿಯೆಯನ್ನು ಮನೆಯಲ್ಲೇ ಕುಳಿತು ಪೂರ್ಣಗೊಳಿಸಬಹುದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ‘ಮೇರಾ ರೇಷನ್’ ಅಥವಾ ‘ಮೇರಾ e-KYC’ ಮೊಬೈಲ್ ಆ್ಯಪ್‌ಗಳ ಮೂಲಕ ಮುಖ ಗುರುತಿಸುವಿಕೆ ವ್ಯವಸ್ಥೆ ಬಳಸಿ ಮಾಡಲಾಗುವ e-KYC, ಕರ್ನಾಟಕದ ಪಡಿತರ ಚೀಟಿ ದಾಖಲೆಗಳಲ್ಲಿ ಸ್ವಯಂಚಾಲಿತವಾಗಿ ನವೀಕರಣವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ರೇಷನ್ ಕಾರ್ಡ್ e-KYC ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುತ್ತಿರುವ ದಟ್ಟಣೆ, ಸರ್ವರ್ ಸಮಸ್ಯೆ ಹಾಗೂ ಬಯೋಮೆಟ್ರಿಕ್ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಆಧರಿಸಿ ಮನೆಯಲ್ಲೇ e-KYC ಮಾಡಿಕೊಳ್ಳುತ್ತಿದ್ದಾರೆ.
ಆದರೆ, ‘ಮೇರಾ ರೇಷನ್’ ಆ್ಯಪ್ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ವ್ಯವಸ್ಥೆಯ ಭಾಗವಾಗಿದ್ದು, ಅದರ e-KYC ವ್ಯವಸ್ಥೆ ಕರ್ನಾಟಕ ಆಹಾರ ಇಲಾಖೆಯ ಪಡಿತರ ನಿರ್ವಹಣಾ ತಂತ್ರಾಂಶದೊಂದಿಗೆ ನೇರವಾಗಿ ಸಂಪರ್ಕ ಹೊಂದಿಲ್ಲ ಎಂದು ರಾಜ್ಯ ಆಹಾರ ಇಲಾಖೆ ತಿಳಿಸಿದೆ.
ಹೀಗಾಗಿ, ಆ್ಯಪ್‌ನಲ್ಲಿ e-KYC ಪೂರ್ಣಗೊಳಿಸಿದ ಮಾತ್ರಕ್ಕೆ ಕರ್ನಾಟಕದ ಪಡಿತರ ಚೀಟಿ ವ್ಯವಸ್ಥೆಯಲ್ಲಿ e-KYC ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುವುದಿಲ್ಲ.
ನ್ಯಾಯಬೆಲೆ ಅಂಗಡಿಯಲ್ಲಿ e-KYC ಕಡ್ಡಾಯ
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ e-POS ಯಂತ್ರದ ಮೂಲಕ ಬಯೋಮೆಟ್ರಿಕ್ ದೃಢೀಕರಣ ನೀಡಿ e-KYC ಪೂರ್ಣಗೊಳಿಸಬೇಕು ಎಂದು ಇಲಾಖೆ ಸೂಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಢೀಕರಿಸದ ಮಾಹಿತಿಯನ್ನು ನಂಬಬಾರದು. ಮೂರನೇ ವ್ಯಕ್ತಿಯ ಮೊಬೈಲ್ ಆ್ಯಪ್‌ಗಳನ್ನು ಬಳಸಿಕೊಂಡು e-KYC ಮಾಡಿಕೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಶೀಘ್ರದಲ್ಲೇ ರಾಜ್ಯದ ಅಧಿಕೃತ ಆ್ಯಪ್
ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುತ್ತಿರುವ ದಟ್ಟಣೆ ಹಾಗೂ ಸರ್ವರ್ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಆಹಾರ ಇಲಾಖೆ ಮನೆಯಲ್ಲೇ e-KYC ಮಾಡಿಕೊಳ್ಳಲು ಅನುಕೂಲವಾಗುವ ಪ್ರತ್ಯೇಕ ಅಧಿಕೃತ ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ.
ಈ ಆ್ಯಪ್ ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಅಧಿಕೃತವಾಗಿ ಬಿಡುಗಡೆಯಾದ ಬಳಿಕವೇ ಅದರ ಮೂಲಕ e-KYC ಮಾಡಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ತಿಳಿಸಲಾಗಿದೆ.
ಆದ್ದರಿಂದ ರಾಜ್ಯ ಸರ್ಕಾರದ ಅಧಿಕೃತ ಆ್ಯಪ್ ಬಿಡುಗಡೆಯಾಗುವವರೆಗೆ ಯಾವುದೇ ಅನಧಿಕೃತ ಅಥವಾ ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಬಳಸಬಾರದು. ರೇಷನ್ ಕಾರ್ಡ್ ಹಾಗೂ e-KYCಗೆ ಸಂಬಂಧಿಸಿದ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವ್ಯವಸ್ಥೆಯನ್ನೇ ಅವಲಂಬಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

