
ಉಡುಪಿ : ತುಳು ಭಾಷೆಗೆ ಕರ್ನಾಟಕ ರಾಜ್ಯದ ಅಧಿಕೃತ ಭಾಷೆೆಯಾಗಿ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ತುಳುಕೂಟ ಉಡುಪಿ ವತಿಯಿಂದ ಅ.4ರಂದು ವಿಶೇಷ ತುಳುವೆರೆ ದಿಬ್ಬಣ ಹಾಗೂ ಗೌಜಿ-&ಮಿನದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 3 ಗಂಟೆಗೆ ಕುಂಜಿಬೆಟ್ಟು ರಿಕ್ಷಾ ನಿಲ್ದಾಣದಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದವರೆಗೆ ತುಳುಕೂಟದ ಸದಸ್ಯರು ಹಾಗೂ ವಿವಿಧ ತುಳು ಸಂಘಟನೆಗಳ ಸಹಯೋಗದೊಂದಿಗೆ ತುಳುವೆರೆ ದಿಬ್ಬಣ ನಡೆಯಲಿದೆ. ಬಳಿಕ 4 ಗಂಟೆಗೆ ಐವೈಸಿ ಸಭಾಂಗಣದಲ್ಲಿ ತುಳು ಭಾಷಾ ಮಾನ್ಯತೆ ಸಂಭ್ರಮ ಹಾಗೂ ವಿಶ್ವಪ್ರಭಾ ಪ್ರಯೋಜಿತ ಎಸ್. ಯು. ಪಣಿಯಾಡಿ ನೆನಪಿನ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಗೂ ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ, ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಸಮಾಜ ಸೇವಕ ಹಾಗೂ ಪಣಿಯಾಡಿ ಕಾದಂಬರಿ ಪ್ರಶಸ್ತಿಯ ಪ್ರಯೋಜಕ ಉಡುಪಿ ವಿಶ್ವನಾಥ ಶೆಣೈ ಹಾಗೂ ಯುವ ಉದ್ಯಮಿ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವಲ್ಲಿ ಹೋರಾಟ ನಡೆಸಿದ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ. ಭಂಡಾರಿ ಅವರನ್ನು ಗೌರವಿಸಲಾಗುವುದು. ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. 2025ನೇ ಸಾಲಿನ ಪಣಿಯಾಡಿ ಕಾದಂಬರಿ ಪ್ರಶಸ್ತಿಗೆ ದಧೂಟಿ ಬನ ಕಾದಂಬರಿ ಆಯ್ಕೆಯಾಗಿದೆ. ಕಾದಂಬರಿಯ ಲೇಖಕಿ ಪುತ್ತೂರಿನ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರಿಗೆ 10 ಸಾವಿರ ನಗದು ಸಮೇತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕೃತಿಯ ಪರಿಚಯವನ್ನು ಸಾಹಿತಿ ವಾಸಂತಿ ಅಂಬಪಾಡಿ ಮಾಡಲಿದ್ದಾರೆ ಎಂದರು.
ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ಡಾ. ವಿ.ಕೆ. ಯಾದವ್, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಪಣಿಯಾಡಿ ಪ್ರಶಸ್ತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ತುಳುವೆರೆ ದಿಬ್ಬಣ ಸಂಚಾಲಕ ದಿವಾಕರ್ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.
