ಕೊಲೆ ಯತ್ನ ಪ್ರಕರಣಕ್ಕೆ ತಿರುವು -ಇಬ್ಬರು ಆರೋಪಿಗಳ ಮೃತದೇಹ ಪತ್ತೆ

0
86

ಉಡುಪಿ : ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ಪತ್ತೆಯಾಗಿವೆ.

ಮೃತರನ್ನು ವಿಟ್ಠಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.

ವಿಟ್ಠಲ್ ನಾಯಕ್ ಅವರ ಅನಾರೋಗ್ಯಪೀಡಿತ ಪತ್ನಿಗೆ ಇಂಜೆಕ್ಷನ್ ಮೂಲಕ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ವಿಟ್ಠಲ್ ಹಾಗೂ ಭವ್ಯಾ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭವ್ಯಾ ಅವರು ನರ್ಸ್ ಎಂದು ಪರಿಚಯಿಸಿಕೊಂಡು ಇಂಜೆಕ್ಷನ್ ನೀಡಿದ್ದರು ಎನ್ನಲಾಗಿದ್ದು, ಘಟನೆ ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು.

ಪ್ರಕರಣದ ಹಿನ್ನೆಲೆಯಲ್ಲಿ ಕೊಲ್ಲೂರು ಪೊಲೀಸರು ಇಬ್ಬರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದರು. ಈ ನಡುವೆ ಬೈಂದೂರು ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಎಸ್‌ಒಸಿಒ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಬೈಂದೂರು ಪಿಎಸ್ಐ ಸುನೀಲ್ ಸ್ಥಳಕ್ಕೆ ಭೇಟಿ ನೀಡಿದ್ದರು.