ಉಡುಪಿ : ನಗರಸಭೆ ವ್ಯಾಪ್ತಿಯ ಸಂತೆಕಟ್ಟೆ ಪುತ್ತೂರು ವಾರ್ಡ್ನಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಕಸ ಹಾಗೂ ಮಾಂಸದ ತ್ಯಾಜ್ಯ ರಾಶಿ ಸಂಗ್ರಹವಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಕೆಲವರು ವಾಹನಗಳಲ್ಲಿ ಬಂದು ಕಸ ಸುರಿದು ಹೋಗುತ್ತಿರುವುದರಿಂದ ಈ ಪ್ರದೇಶ ಅನಧಿಕೃತ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಹಿಂದೆ ರಸ್ತೆಯ ಬದಿಯಲ್ಲಿದ್ದ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಕಸ ಹಾಗೂ ಮಾಂಸದ ತ್ಯಾಜ್ಯ ಸಂಗ್ರಹವಾಗುತ್ತಿರುವುದರಿಂದ ದುರ್ವಾಸನೆ ಹರಡುತ್ತಿದೆ. ಈ ರಸ್ತೆಯು ಸ್ಥಳೀಯ ನಿವಾಸಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ತ್ಯಾಜ್ಯದ ದುರ್ವಾಸನೆಯಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ.
ತ್ಯಾಜ್ಯದ ರಾಶಿಯಿಂದ ಬೀದಿ ನಾಯಿಗಳ ಹಾವಳಿ
ರಸ್ತೆಯ ಬದಿಯಲ್ಲಿ ಮಾಂಸದ ತ್ಯಾಜ್ಯ ಹಾಗೂ ಇತರ ಕಸಗಳು ರಾಶಿಯಾಗಿ ಬಿದ್ದಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಸ್ವಚ್ಛತೆಯ ಕೊರತೆಯೂ ಎದ್ದು ಕಾಣುತ್ತಿದೆ. ಮಾರುಕಟ್ಟೆ ಹಿಂಭಾಗದ ಪುತ್ತೂರು ವಾರ್ಡ್ನ ವಸತಿ ಪ್ರದೇಶದ ನಿವಾಸಿಗಳಿಗೆ ಇದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗುವ ಆತಂಕವಿದೆ.
ಇದಲ್ಲದೆ, ಕೆಲ ಕಾರ್ಮಿಕರು ರಸ್ತೆಯ ಬದಿಯಲ್ಲೇ ನಿತ್ಯಕರ್ಮಗಳನ್ನು ನಿರ್ವಹಿಸುತ್ತಿರುವುದರಿಂದ ಪರಿಸರದ ಸ್ವಚ್ಛತೆ ಹದಗೆಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವವರ ವಿರುದ್ಧ ಕ್ರಮ ಕೈಗೊಂಡು, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹೊಂಡಗುಂಡಿ ರಸ್ತೆ, ಬೀದಿ ದೀಪಗಳ ಕೊರತೆ
ಸಂತೆಕಟ್ಟೆ ಮಾರುಕಟ್ಟೆಯ ಹಿಂಭಾಗದ ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ವೇಳೆ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿದೆ.
ಇದೇ ಸಂದರ್ಭದಲ್ಲಿ ರಾತ್ರಿ ವೇಳೆ ಮದ್ಯಪಾನ ಮಾಡಿದವರ ಹಾವಳಿ ಹೆಚ್ಚುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಬಸ್ಸಿಗಾಗಿ ಕಾಯುವ ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ರಸ್ತೆ ದುರಸ್ತಿ, ಬೀದಿ ದೀಪಗಳ ಅಳವಡಿಕೆ ಹಾಗೂ ರಾತ್ರಿ ವೇಳೆ ಸುರಕ್ಷತೆ ಕಲ್ಪಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ
ಈ ಪ್ರದೇಶದ ಸಮಸ್ಯೆಗಳ ಕುರಿತು ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಬೇಕು. ಕಸ ಮತ್ತು ಮಾಂಸದ ತ್ಯಾಜ್ಯವನ್ನು ತೆರವುಗೊಳಿಸುವುದರ ಜೊತೆಗೆ, ರಾತ್ರಿ ವೇಳೆ ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಯ ಬದಿಯ ಪೊದೆಗಳನ್ನು ತೆರವುಗೊಳಿಸಿ, ರಸ್ತೆ ದುರಸ್ತಿ ಹಾಗೂ ಬೀದಿ ದೀಪಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಸಾರ್ವಜನಿಕರು ಹಾಗೂ ವಸತಿ ಪ್ರದೇಶದ ನಿವಾಸಿಗಳ ಪರವಾಗಿ ಧ್ವನಿ ಎತ್ತಿರುವ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಅವರು, ಸಂತೆಕಟ್ಟೆ ಮಾರುಕಟ್ಟೆಯ ಹಿಂಭಾಗದ ರಸ್ತೆಯಲ್ಲಿರುವ ಸಮಸ್ಯೆಗಳಿಗೆ ನಗರಸಭೆ ಕೂಡಲೇ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

