17 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಹನೀಫ್ ಬಂಧನ

0
13

ಬಂಟ್ವಾಳ : ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಮತ್ತೊಂದು ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ತಾಲೂಕಿನ ತಲಪಾಡಿ ನಿವಾಸಿ ಹನೀಫ್ ಅಲಿಯಾಸ್ ಕೊಕ್ಕಡ ಹನೀಫ್ (57) ಎಂದು ಗುರುತಿಸಲಾಗಿದೆ.

2009ರಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೆಇ ಕಾಯ್ದೆಯ ಪ್ರಕರಣದಲ್ಲಿ ಹನೀಫ್ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಆತನ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು.

ಇದಲ್ಲದೆ, 2023ರಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿಯೂ ಹನೀಫ್ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಈ ಪ್ರಕರಣದಲ್ಲಿ ಹಲ್ಲೆ, ಮನೆಗೆ ಅಕ್ರಮ ಪ್ರವೇಶ, ಆಸ್ತಿ ಹಾನಿ, ಬೆಂಕಿ ಹಚ್ಚುವುದು ಹಾಗೂ ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳು ದಾಖಲಾಗಿದ್ದವು.

ಅಕ್ಟೋಬರ್ 9ರಂದು ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸ್‌ಐ ಬಶೀರ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ಜಗದೀಶ್ ಮತ್ತು ಸಂತೋಷ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಗವಿಸಿದ್ದಪ್ಪ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರ ತಂಡ ಯಶಸ್ವಿಯಾಗಿದೆ.