ನದಿ ತೀರದ ಪವಿತ್ರ ತಪೋಭೂಮಿ ಬಲ್ಲಂಗೇರಿ ಸೂರ್ಯನಾರಾಯಣ ದೇವಸ್ಥಾನ ಪುನರ್ ನಿರ್ಮಾಣ : 2027ರ ಫೆಬ್ರವರಿ 7 ರಿಂದ 10ರವರೆಗೆ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

0
44

-ಮಂದಾರ ರಾಜೇಶ್ ಭಟ್

​ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಎಂಬ ಸುಂದರ ಪ್ರದೇಶದ ನದಿ ದಂಡೆಯ ಮಡಿಲಿನಲ್ಲಿ ಪುರಾತನ ದೈವಿಕ ಶಕ್ತಿಯೊಂದು ಜಾಗೃತಗೊಂಡು ಇದೀಗ ವೈಭವದ ದೇವಸ್ಥಾನವಾಗಿ ಪುನರ್ನಿಮಾಣಗೊಳ್ಳುತ್ತಿದೆ.

ಸುಮಾರು 25 ವರ್ಷಗಳ ಹಿಂದೆ ಈ ನದಿತೀರದಲ್ಲಿ ದೇವಸ್ಥಾನದ ಸನ್ನಿಧಾನವಿದೆ ಎಂಬ ಪವಿತ್ರ ಮಾಹಿತಿ ಸ್ಥಳೀಯರಿಗೆ ಲಭಿಸಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅಲ್ಲಿ ಬೆಳೆದಿದ್ದ ಪೊದೆಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ, ಅದೊಂದು ಪುರಾತನ ಶ್ರೀ ಸೂರ್ಯನಾರಾಯಣ ದೇವರ ಪವಿತ್ರ ಕ್ಷೇತ್ರ ಎಂಬುದು ದೃಢಪಟ್ಟಿತ್ತು.

​ದೈವಿಕ ಸನ್ನಿಧಿ ಗೋಚರವಾದ ದಿನದಿಂದಲೂ ಸ್ಥಳೀಯ ನಿವಾಸಿಗಳು ನಿರಂತರವಾಗಿ ಭಜನೆ, ಗಣಪತಿ ಹವನ, ನಾಗರಾಧನೆ, ದುರ್ಗಾಪೂಜೆ, ನವರಾತ್ರಿ ಉತ್ಸವ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸೂರ್ಯನಾರಾಯಣ ದೇವರ ಆರಾಧನೆಯನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನೆರವೇರಿಸಿಕೊಂಡು ಬಂದಿದ್ದರು.

​ತದನಂತರ, ಭಕ್ತಾದಿಗಳ ಅಪೇಕ್ಷೆಯಂತೆ ದೈವಜ್ಞರ, ಜ್ಯೋತಿಷಿಗಳ ಹಾಗೂ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ‘ಪ್ರಶ್ನ ಚಿಂತನೆ’ ನಡೆಸಿ ಬಾಲಾಲಯವನ್ನು ನಿರ್ಮಿಸಲಾಯಿತು.

ವಾಸ್ತುಶಾಸ್ತ್ರಜ್ಞರ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಕ್ಷೇತ್ರದಲ್ಲಿ ಭವ್ಯ ನೂತನ ಆಲಯ ನಿರ್ಮಾಣದ ಮಹತ್ಕಾರ್ಯಕ್ಕೆ ಮುನ್ನುಡಿ ಬರೆಯಲಾಯಿತು.

​ಸಂಘಟಿತ ಶ್ರಮ ಮತ್ತು ಭಕ್ತಿ ಸೇವೆ

ಕ್ಷೇತ್ರದ ಪುನರುತ್ಥಾನಕ್ಕಾಗಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು. ಆರಾಧನ ಸಮಿತಿ ಸಹಕಾರದೊಂದಿಗೆ, ಶ್ರದ್ದೆ ಮತ್ತು ಪರಿಶ್ರಮ, ಭಕ್ತಾದಿಗಳ ಅಪಾರ ಸಹಕಾರ, ದಾನಿಗಳ ಉದಾರ ಕೊಡುಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಶ್ರಮದಾನದ ಫಲವಾಗಿ ಇಡೀ ನಿರ್ಮಾಣ ಕಾರ್ಯವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದೆ.

ಸೀತಾರಾಮ ರೈ ಅವರ ನಿರಂತರ ಶ್ರದ್ಧೆ ಮತ್ತು ಪರಿಶ್ರಮ, ಭಕ್ತಾದಿಗಳ ಅಪಾರ ಸಹಕಾರ, ದಾನಿಗಳ ಉದಾರ ಕೊಡುಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಶ್ರಮದಾನದ ಫಲವಾಗಿ ಇಡೀ ನಿರ್ಮಾಣ ಕಾರ್ಯವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದೆ.

ಸನ್ನಿಧಾನದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮುಹೂರ್ತ ನಿಗದಿಯಾಗಿದ್ದು, ದಿನಾಂಕ 07-02-2027 ರಿಂದ 10-02-2027 ರವರೆಗೆ ಅತ್ಯಂತ ವಿಜೃಂಭಣೆಯಿಂದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಆರಾಧನಾ ಸಮಿತಿ ಅಧಿಕೃತವಾಗಿ ತಿಳಿಸಿದೆ.

​”ಧರ್ಮೋ ರಕ್ಷತಿ ರಕ್ಷಿತಃ” ಎಂಬ ಸನಾತನ ನಂಬಿಕೆಯಂತೆ, ಮರೆತುಹೋಗಿದ್ದ ದೈವಿಕ ಶಕ್ತಿಯನ್ನು ಪುನರ್ಜಾಗೃತಗೊಳಿಸಿ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸುವುದು ತಲೆಮಾರಿನ ಅತ್ಯಂತ ಶ್ರೇಷ್ಠ ಸೇವೆಯಾಗಿದೆ. ಭಕ್ತಿ, ಒಗ್ಗಟ್ಟು ಮತ್ತು ಧಾರ್ಮಿಕ ಶ್ರದ್ಧೆಯಿಂದ ಕೂಡಿ ಮಾಡಿದ ಸೇವೆಗೆ ಭಗವಂತನ ಕೃಪೆ ನಿರಂತರವಾಗಿರುತ್ತದೆ. ಪ್ರತ್ಯಕ್ಷ ದೇವನಾದ ಶ್ರೀ ಸೂರ್ಯನಾರಾಯಣ ಸ್ವಾಮಿಯ ದಿವ್ಯ ಕೃಪಾಕಟಾಕ್ಷವು ಸಕಲ ಭಕ್ತಾದಿಗಳ ಮೇಲಿರಲಿ ಹಾಗೂ ಈ ಪುಣ್ಯ ಬ್ರಹ್ಮಕಲಶೋತ್ಸವವು ನಾಡಿಗೆ ಕ್ಷೇಮ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ ಎಂಬುದು ಭಕ್ತರ ಆಶಯವಾಗಿದೆ.