
ಮಂಗಳೂರು : ವಿಶ್ವಕೊಂಕಣಿ ಕೇಂದ್ರದ ಸಹಯೋಗದೊಂದಿಗೆ, ‘ವರ್ಧನಿ’ ಪ್ರಾಯೋಜಕತ್ವದಲ್ಲಿ ಹಾಗೂ ಸಾಧನಾ ಬಳಗದ ಸಹಕಾರದೊಂದಿಗೆ ಆಯೋಜಿಸಲಾದ ಮಕ್ಕಳ ಮೂರು ದಿನಗಳ ಉಚಿತ ನಾಟಕ ತರಬೇತಿ ಶಿಬಿರ “ಬಾಲರಂಗ” ಉದ್ಘಾಟನಾ ಸಮಾರಂಭವು ಅಕ್ಟೋಬರ್ 11ರಂದು ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದಲ್ಲಿ ನಡೆಯಿತು.
ಮಂಗಳೂರಿನ ಎಂಆರ್ಪಿಎಲ್ನ ನಿವೃತ್ತ ಅಧಿಕಾರಿ ಡಾ. ನರೇಶ್ ರಾಮದಾಸ ಕಿಣಿ ಅವರು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಗೀತ, ನಾಟಕ, ನೃತ್ಯ, ರಂಗಪರಿಕರಗಳ ತಯಾರಿ, ಮುಖವಾಡ ತಯಾರಿಕೆ ಹಾಗೂ ರಂಗಸಂಗೀತದಂತಹ ವಿವಿಧ ಕಲಾ ಪ್ರಕಾರಗಳ ಅಭ್ಯಾಸವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಇಂತಹ ಕಲಾ ತರಬೇತಿ ನೀಡುವ ಕಾರ್ಯವನ್ನು ವಿಶ್ವಕೊಂಕಣಿ ಕೇಂದ್ರ ಕೈಗೆತ್ತಿಕೊಂಡಿರುವುದು ಉಪಯುಕ್ತವಾಗಿದೆ. ಮಕ್ಕಳು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡು ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಡಿ. ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ್, ಸತೀಶ್ ಪಿ. ನೀನಾಸಂ, ಅರುಣ್ ಪ್ರಕಾಶ್ ನಾಯಕ, ಅಶೋಕ ಕಾಮತ್, ಪುಷ್ಪಲತಾ ಭಟ್ ಹಾಗೂ ಶಿಬಿರದ ಪ್ರಾಯೋಜಕಿ ವರ್ಧನಿಯ ಉಷಾ ನಂದಗೋಪಾಲ ಶೆಣೈ ಉಪಸ್ಥಿತರಿದ್ದರು.
ಸಾಧನಾ ಬಳಗದ ಮುಖ್ಯಸ್ಥ ಪ್ರಕಾಶ್ ಶೆಣೈ ಅವರು ಶಿಬಿರದ ಕುರಿತು ಮಾಹಿತಿ ನೀಡುತ್ತಾ, ಮೂರು ದಿನಗಳ ಸನಿವಾಸ ಶಿಬಿರದಲ್ಲಿ ಸುಮಾರು 50 ಮಕ್ಕಳು ಭಾಗವಹಿಸಲಿದ್ದು, ಅವರಿಗೆ ನಾಟಕದ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಉಚಿತ ಊಟೋಪಚಾರ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ಕಿಣಿ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ್ ನಾಯಕ್ ಧನ್ಯವಾದ ಸಮರ್ಪಿಸಿದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶೈವಿಕಾ, ಅನ್ವಿತಾ ಹಾಗೂ ಪ್ರಜಕ್ತಾ ಪ್ರಾರ್ಥಿಸಿದರು.
ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ರಂಗಕಲೆಯ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ “ಬಾಲರಂಗ” ಶಿಬಿರವು ಮಕ್ಕಳಿಗೆ ಕಲಿಕೆಯ ಜೊತೆಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.
