ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿ ಸಂಭ್ರಮ : ಮುತ್ತೈದೆಯರಿಗೆ ಬಾಗೀನ ಸಮರ್ಪಣೆ

0
12

ಉಡುಪಿ: ಪ್ರಸಿದ್ಧ ಶಕ್ತಿಪೀಠ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ನವರಾತ್ರಿಯ ಎರಡನೇ ದಿನ ತಪಸ್ಸು, ಸಂಯಮ ಮತ್ತು ಜ್ಞಾನದ ಸಂಕೇತವಾದ ಶ್ರೀ ಬ್ರಹ್ಮಚಾರಿಣಿ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಇಬ್ಬರು ಮುತ್ತೈದೆಯರಿಗೆ ಬಾಗೀನ ಸಮರ್ಪಿಸಲಾಯಿತು. ದೇವಸ್ಥಾನದಲ್ಲಿ ನಡೆಯುತ್ತಿರುವ ಚಂಡಿಕಾಯಾಗದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನವರಾತ್ರಿ ಪೂಜೆಯಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಮಹೋತ್ಸವದ ಅಂಗವಾಗಿ ಮೊದಲ ದಿನದಿಂದಲೇ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸೇವೆಗಳು ನಡೆಯುತ್ತಿವೆ.

ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರ ಸಂಚಾರ ಹೆಚ್ಚಿದ್ದು, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ದೇವಸ್ಥಾನದ ವೇದಿಕೆಯಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಕೊಲ್ಲೂರು ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಕಳೆಗಟ್ಟಿದೆ.