
-ಮಂದಾರ ರಾಜೇಶ್ ಭಟ್
ತುಳುನಾಡಿನ ಕರಾವಳಿಯ ಸಾಂಸ್ಕೃತಿಕ ಕಹಳೆಯನ್ನು ರಾಜ್ಯದಾದ್ಯಂತ ಮೊಳಗಿಸಿ, ತಮ್ಮ ಬಹುಮುಖಿ ಪ್ರತಿಭೆಯಿಂದ ಕರುನಾಡಿನ ಮನೆಮನೆಗಳಲ್ಲಿ ನೆಲೆಸಿರುವ ಹೆಮ್ಮೆಯ ತುಳುನಾಡಿನ ಹುಡುಗಿ, ಮಹಾನಟಿ ಖ್ಯಾತಿಯ ಚಲನಚಿತ್ರ ನಟಿ ಹಾಗೂ ಜನಪ್ರಿಯ ನಿರೂಪಕಿ ಆರಾಧನಾ ಭಟ್ ಅವರಿಗೆ ಪ್ರತಿಷ್ಠಿತ ‘ಅಗರಿ ಸಂಸ್ಥೆ’ಯಿಂದ ಇತ್ತೀಚೆಗೆ ಗೌರವ ಸನ್ಮಾನ ಜರುಗಿದೆ.
ಮೂಡಬಿದಿರೆಯ ವಿಶ್ವಪ್ರಸಿದ್ಧ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ, ಅಲ್ಲಿನ ಸಾಂಸ್ಕೃತಿಕ ವಾತಾವರಣ ಹಾಗೂ ಸಂಸ್ಥೆಯ ಪ್ರೋತ್ಸಾಹದಿಂದ ಕಲಾ ಲೋಕಕ್ಕೆ ಕಾಲಿಟ್ಟ ಆರಾಧನಾ ಭಟ್, ಇಂದು ಸಾಧನೆಯ ಉತ್ತುಂಗವನ್ನು ಏರಿದ್ದಾರೆ.
ಶಿಕ್ಷಣದ ಗಟ್ಟಿಯಾದ ಅಡಿಪಾಯದೊಂದಿಗೆ ಕಲೆ, ನಟನೆ ಹಾಗೂ ನಿರೂಪಣೆಯನ್ನು ಸಮಚಿತ್ತದಿಂದ ಸ್ವೀಕರಿಸಿ, ಎದುರಾದ ಪ್ರತಿ ಸವಾಲನ್ನೂ ಮೆಟ್ಟಿ ನಿಂತ ಕರಾವಳಿಯ ಈ ಅಪ್ರತಿಮ ಪ್ರತಿಭೆಯ ಸಾಧನೆ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ.

ಬಣ್ಣದ ಲೋಕದ ಮಜಾ ಭಾರತದ ಬೆಡಗಿಯಾಗಿ, ಬೆಳ್ಳಿತೆರೆಯ ಮಹಾನಟಿಯಾಗಿ ಹಾಗೂ ಬೃಹತ್ ಸಭಾ ಕಾರ್ಯಕ್ರಮಗಳ ವಿಶ್ವಾಸಾರ್ಹ ನಿರೂಪಕಿಯಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಆರಾಧನಾ ಭಟ್ ಅವರನ್ನು ಅಗರಿ ಸಂಸ್ಥೆಯು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿರುವುದು ಕಲಾಕ್ಷೇತ್ರಕ್ಕೆ ಸಂದ ಗೌರವವಾಗಿದೆ.
ಕಷ್ಟದ ಹಾದಿಯಲ್ಲಿ ಎದೆಗುಂದದೆ, ತಮ್ಮ ಪರಿಶ್ರಮದಿಂದಲೇ ಕರುನಾಡಿನ ಯುವ ಜನತೆಗೆ ನಿರಂತರವಾಗಿ ಪ್ರೇರಕ ಶಕ್ತಿಯಾಗಿ ನಿಂತಿರುವ ಇವರ ಸಾಧನೆ ಸದಾ ಸ್ಮರಣೀಯ.
