ಐವನ್ ಡಿ’ಸೋಜಾ ನೇತೃತ್ವದಲ್ಲಿ 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ

0
4

ನ. 8ರಂದು ಮಂಗಳೂರಿನ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಆಚರಣೆ | ವಿದ್ಯಾರ್ಥಿನಿಯರಿಗೆ ಚಿತ್ರಕಲೆ, ಭರತನಾಟ್ಯ ಹಾಗೂ ಗೂಡುದೀಪ ಸ್ಪರ್ಧೆ

ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ 12ನೇ ವರ್ಷದ ಭಾವೈಕ್ಯತೆಯ ಸಂಗಮ ದೀಪಾವಳಿ ಸಂಭ್ರಮಾಚರಣೆ ನವೆಂಬರ್ 8ರಂದು ಭಾನುವಾರ ಮಂಗಳೂರಿನಲ್ಲಿ ನಡೆಯಲಿದೆ.

ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದ ಸಭಾಂಗಣದಲ್ಲಿ ಮಧ್ಯಾಹ್ನದಿಂದ ರಾತ್ರಿ ವರೆಗೆ ನಡೆಯಲಿರುವ ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ದೀಪಾವಳಿ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಚರ್ಚಿಸಲಾಯಿತು. ವಿವಿಧ ಕಾರ್ಯಕ್ರಮಗಳ ನಿರ್ವಹಣೆಗಾಗಿ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

ಅಂದು ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಶಾಲಾ ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆ, ಭರತನಾಟ್ಯ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಯಿತು. ವಿವಿಧ ಧರ್ಮಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರುವುದು ಈ ಸಂಭ್ರಮಾಚರಣೆಯ ಮುಖ್ಯ ಉದ್ದೇಶವಾಗಿದೆ.

ಪೂರ್ವಭಾವಿ ಸಭೆಯಲ್ಲಿ ಸಂಚಾಲಕ ಪ್ರದೀಪ್ ಬೇಕಲ್, ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಜೇಮ್ಸ್ ಪ್ರವೀಣ್, ನೀತು ಡಿ’ಸೋಜಾ, ಕುಮಾರಿ ಪ್ರಗತಿ ಬೇಕಲ್, ಅಲ್ಟ್ಸೈನ್ ಡಿಕುನ್ಹ, ಅಶ್ರಫ್ ಬೆಂಗ್ರೆ, ಮೇರಿ ಡಿ’ಸೋಜಾ, ಲಿಡಿಯಾ ಡಿ’ಸೋಜಾ, ಡೆನ್ನಿಸ್ ಪಾಯಸ್ (ಮುಂಬೈ), ಮನೀಶ್ ಬೋಳಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.