ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ ಕ್ಕೆ ಕಳಶವಿಟ್ಟ : ಮುಂಬಯಿ ಯಕ್ಷಗಾನ ಸಮ್ಮೇಳನ – 2026

0
10
ಸಮ್ಮೇಳನ ಸಂಪುಟ 'ಯಕ್ಷಗಾನ ಮುಂಬೆಳಗು' ಬಿಡುಗಡೆ

ಮುಂಬೈ ವಿಶ್ವವಿದ್ಯಾನಿಲಯದಿಂದ ಅಜೆಕಾರು ಕಲಾಭಿಮಾನಿ ಬಳಗಕ್ಕೆ ಗ್ರಂಥ ಬಾಗಿನ ‘ಯಕ್ಷ ರಜತ’

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತ ಮಹೋತ್ಸವ ಸಂಭ್ರಮ ಅಂಗವಾಗಿ ಅಕ್ಟೋಬರ 3 ಮತ್ತು 4ರಂದು ಕುರ್ಲಾ ಪೂರ್ವದ ಬಂಟರ ಭವನದ ಡಾ.ಆರ್.ಕೆ.ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ಜರಗಿದ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಯಕ್ಷಗಾನ ರಂಗದ ಮೂಲಭೂತ ಆಶಯಗಳನ್ನು ಹೊಂದಿದ 8 ಮಹತ್ವದ ವಿಚಾರ ಗೋಷ್ಠಿಗಳು ಹಾಗೂ ತೆಂಕುತಿಟ್ಟು ಮತ್ತು ಬಡಗು ತಿಟ್ಟುಗಳ ಪ್ರಯೋಗಶೀಲ ಯಕ್ಷಗಾನ ಪ್ರದರ್ಶನಗಳು ಯಕ್ಷ ಕಲಾಭಿಮಾನಿಗಳ ಮನಸೂರೆಗೊಂಡವು.

ಕಳೆಗಟ್ಟಿದ ಕಲಾವೇದಿಕೆ

ಮುಂಬಯಿಯ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗಕ್ಕೆ 25 ವರ್ಷ ತುಂಬಿದ ರಜತಪರ್ವ ಸಂದರ್ಭದಲ್ಲಿ ಆಯೋಜಿಸಲಾದ 2 ದಿನಗಳ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಅತ್ಯಂತ ಅದ್ದೂರಿಯಾಗಿ ಜರಗಿತು. ದಿ. ಕಲ್ಲಾಡಿ ವಿಠಲಶೆಟ್ಟಿ ಅವರ ಹೆಸರಿನ ಸಮ್ಮೇಳನಾಂಗಣ, ಕೆ.ಗೋವಿಂದ ಭಟ್ ಮಹಾದ್ವಾರ, ದಿ.ಅಳಿಕೆ ರಾಮಯ್ಯ ರೈ, ಎಚ್ ಬಿ ಎಲ್ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ದ್ವಾರಗಳು ಹಾಗೂ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿ ಸಭಾಂಗಣಗಳು ಸಮ್ಮೇಳನದ ಯಶಸ್ಸಿಗೆ ಸಾಕ್ಷಿಗಳಾದವು. ಸಮ್ಮೇಳನದ ಉದ್ಘಾಟನೆಯಿಂದ ತೊಡಗಿ ಸಮಾರೋಪ ಸಮಾರಂಭದ ವರೆಗೆ ಎಲ್ಲಾ ಕಾರ್ಯಕ್ರಮಗಳು ಡಾ ಆರ್. ಕೆ .ಶೆಟ್ಟಿ ಪ್ರಾಯೋಜಿತ ಯಕ್ಷಕಲಾ ವೇದಿಕೆಯಲ್ಲಿ ಸುಸೂತ್ರವಾಗಿ ನೆರವೇರಿದವು. ಡಾ. ಎಂ. ಮೋಹನ ಆಳ್ವ ಅವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ,ಹಿರಿಯ ಕಲಾಪೋಷಕ ಡಾ.ಟಿ.ಶ್ಯಾಮ ಭಟ್ ಸಮ್ಮೇಳನಾಧ್ಯಕ್ಷರಾಗಿ ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿ ಅಧ್ಯಕ್ಷರು

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಎಂಆರ್‌ಜಿ ಗ್ರೂಪಿನ ಡಾ। ಕೆ. ಪ್ರಕಾಶ್ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅವರು ಸಮ್ಮೇಳನದ ಸವಿ ಸಂಪುಟ ‘ಯಕ್ಷಗಾನ ಮುಂಬೆಳಗು’ ಗ್ರಂಥವನ್ನು ಬಿಡುಗಡೆಗೊಳಿಸಿ. ಪ್ರಧಾನ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಸಂಪಾದಕ ಮಂಡಳಿಗೆ ಹಸ್ತಾಂತರಿಸಿದರು.

ಕಾರ್ಯಾಧ್ಯಕ್ಷರು

ಇದೇ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಸ್ವಂತ ಕೃತಿ ‘ಯಕ್ಷಾಲೋಕ’ ಯಕ್ಷಗಾನ ಸಂಪ್ರಬಂಧಗಳ ಸಂಕಲನವನ್ನು ಡಾ.ಎಂ.ಮೋಹನ ಆಳ್ವ ಬಿಡುಗಡೆಗೊಳಿಸಿದರು. ಭಾಗವತ ಹರೀಶ್ ಶೆಟ್ಟಿ ಸೂಡ ಅವರ ಅರ್ಥಸಹಿತ ಐದು ಪ್ರಸಂಗಗಳ ‘ಯಕ್ಷ ಪಂಚೋಳಿ’ ತುಳು ಕೃತಿಯನ್ನು ಅಧ್ಯಕ್ಷ ಪ್ರವೀಣ್ ಬಿ.ಶೆಟ್ಟಿ ಲೋಕಾರ್ಪಣೆಗೈದರು.

ಸಾಂಪ್ರದಾಯಿಕ ‘ಕೇಳಿ’ ಅಬ್ಬರತಾಳ

ಉದ್ಘಾಟನಾ ಸಮಾರಂಭಕ್ಕಿಂತ ಮೊದಲು ಬಂಟರ ಸಂಘದ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರಧಾನ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಸಾಂಕೇತವಾಗಿ ದೀಪ ಬೆಳಗಿಸಿದರು. ಬಳಿಕ ಯಕ್ಷಗಾನದ ಸಾಂಪ್ರದಾಯಿಕ ‘ಕೇಳಿ’ ಬಾರಿಸಲಾಯ್ತು.

ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ದಿ.ಕಲ್ಲಾಡಿ ವಿಠಲ ಶೆಟ್ಟಿ ಹೆಸರಿನ ಸಮ್ಮೇಳನಾಂಗಣದಲ್ಲಿ ಸೂರಿಕುಮೇರು ಗೋವಿಂದ ಭಟ್ ಮಹಾದ್ವಾರವನ್ನು ಉದ್ಘಾಟಿಸಿದ ಅತಿಥಿ ಗಣ್ಯರನ್ನು ದಿ.ಹೆಚ್.ಬಿ.ಎಲ್. ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ , ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ದ್ವಾರಗಳ ಮೂಲಕ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿ ಸಭಾಂಗಣಕ್ಕೆ ಕರೆತರಲಾಯಿತು. ಡಾ.ಆರ್.ಕೆ.ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ‘ಅಬ್ಬರ ತಾಳ’ದೊಂದಿಗೆ ಉದ್ಘಾಟನಾ ಸಮಾರಂಭ ಜರಗಿತು.

ಚಿಂತನೆಗೆ ಹಚ್ಚಿದ ಗೋಷ್ಠಿಗಳು

ಸಮ್ಮೇಳನದಲ್ಲಿ ನಡೆದ 8 ವಿಚಾರ ಗೋಷ್ಠಿಗಳು ಯಕ್ಷಗಾನ ಕಲೆಯ ಆಗು ಹೋಗುಗಳ ಬಗ್ಗೆ ಕಲಾಸಕ್ತರ ಗಮನ ಸೆಳೆದವು.

ಗೋಷ್ಠಿ ೧.: ಮುಂಬಯಿ ಮಹಾನಗರದಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಕೃತಿ ರಚನೆ ಮಾಡಿರುವ ಡಾ. ವೈ.ವಿ. ಮಧುಸೂಧನ ರಾವ್ ಅವರು ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ವಿಚಾರ ಮಂಡಿಸಿದರು. ‘ಮುಂಬಯಿ ಯಕ್ಷಗಾನ – ಒಂದು ಅವಲೋಕನ’ ಎಂಬ ಈ ಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದೆ ಗೀತಾ ಎಲ್. ಭಟ್ ಮತ್ತು ಲೇಖಕ, ಯಕ್ಷಗಾನ ಅರ್ಥಧಾರಿ ಕೋಲ್ಯಾರು ರಾಜು ಶೆಟ್ಟಿ ಪ್ರತಿಕ್ರಿಯೆ ನೀಡಿದರು.

೨. ಎರಡನೇ ವಿಚಾರಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನದ ಬಗ್ಗೆ ಚಿಂತನೆ ನಡೆಯಿತು. ತುಮಕೂರು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ.ಆರತಿ ಪಟ್ರಮೆ ‘ಮಹಿಳಾ ಯಕ್ಷಗಾನ’ದ ಬಗ್ಗೆ ಉಪನ್ಯಾಸವಿತ್ತರು. ಶಿಕ್ಷಕ ಮತ್ತು ಯಕ್ಷಗಾನ ನಿರ್ದೇಶಕ ದೀವಿತ್ ಎಸ್. ಕೆ. ಪೆರಾಡಿ ‘ಮಕ್ಕಳ ಯಕ್ಷಗಾನ’ದ ಬಗ್ಗೆ ಮಾತನಾಡಿದರು.

೩. ಪ್ರದರ್ಶನ ಕಲೆಯಾದ ಯಕ್ಷಗಾನದ ಆಶು ಸಂಭಾಷಣೆಗೆ ಪ್ರಬಲವಾದ ಸಾಹಿತ್ಯಿಕ ಹಿನ್ನೆಲೆಯಿದೆ. ಕಲಾವಿದರ ಅರ್ಥಗಾರಿಕೆಯಲ್ಲಿ ಶಾಸ್ತ್ರ – ಪುರಾಣಗಳ ಮರು ವಿಮರ್ಶೆ ನಡೆಯುವುದನ್ನು ಮಾತಿನ ಮಂಟಪವಾದ ತಾಳಮದ್ದಳೆಯಲ್ಲಿ ಕಾಣಬಹುದು. ಅದಕ್ಕಾಗಿಯೇ ಏರ್ಪಡಿಸಲಾದ ‘ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ’ ಎಂಬ ಮೂರನೇ ಗೋಷ್ಠಿಯಲ್ಲಿ ಈ ಬಗ್ಗೆ ಚಿಂತನೆ ನಡೆಯಿತು. ಹಿರಿಯ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ಮತ್ತು ಗಣರಾಜ ಕುಂಬಳೆ ಈ ಬಗ್ಗೆ ತಮ್ಮ ವಿಚಾರ ಮಂಡಿಸಿದರು. ಎಂ.ಕೆ. ರಮೇಶ ಆಚಾರ್ಯ ಮತ್ತು ಸದಾಶಿವ ಆಳ್ವ ತಲಪಾಡಿ ಪ್ರತಿಕ್ರಿಯಿಸಿದರು.

೪. ಸಮ್ಮೇಳನದ ಎರಡನೇ ದಿನ ಸಾಹಿತ್ಯ ಸಮ್ಮೇಳನಗಳ ಮಾದರಿಯಲ್ಲಿ ವಿಶೇಷವಾದ ಯಕ್ಷಗಾನ ಕವಿಗೋಷ್ಠಿಯೊಂದನ್ನು ಆಯೋಜಿಸಲಾಗಿತ್ತು. ಹಿರಿಯ ಸಂಶೋಧಕ ಮತ್ತು ಪ್ರಸಂಗ ಕರ್ತರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರ ಅಧ್ಯಕ್ಷತೆತಯಲ್ಲಿ ಜರಗಿದ’ಯಕ್ಷಗಾನ ಕವಿ ಸಮಯ’ದಲ್ಲಿ ಪ್ರಸಂಗಕರ್ತ ಕವಿಗಳಾದ ಹರೀಶ ಶೆಟ್ಟಿ ಸೂಡಾ, ಡಾ.ದಿನಕರ ಎಸ್.ಪಚ್ಚನಾಡಿ, ದಿವಾಣ ದುರ್ಗಾಪ್ರಸಾದ್ ಭಟ್ ತಾವೇ ಬರೆದ ಯಕ್ಷಗಾನದ ಪದ್ಯಗಳನ್ನು ವಾಚಿಸಿದರು. ಕಲಾವಿದರಾದ ಶ್ರೇಯಾ ಉಚ್ಚಿಲ್, ರೋಹಿತ್ ಉಚ್ಚಿಲ್, ಮಯೂರ್ ನಾಯಗ ಮತ್ತು ಮಧುಸೂದನ ಅಲೆವೂರಾಯ ಅವರ ಹಿಮ್ಮೇಳದಲ್ಲಿ ಆ ಪದ್ಯಗಳನ್ನು ಯಕ್ಷಗಾನ ಭಾಗವತಿಕೆ ಮೂಲಕ ಪ್ರಸ್ತುತಪಡಿಸಲಾಯಿತು.

ಅಪರಾಹ್ನ ಯಕ್ಷಗಾನ ಅರ್ಥಧಾರಿ ಹರೀಶ್ ಭಟ್ ಬಳಂತಿಮೊಗರು ಅವರು ‘ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ’ ಮಾಡಿದರು.

೫. ಯಕ್ಷಗಾನ ಕೇವಲ ಒಂದು ರಂಗ ಕಲೆ ಮಾತ್ರವಲ್ಲ; ಅದೊಂದು ಆರಾಧನಾ ಕಲೆ. ತುಳುನಾಡಿನ ಇತರ ಆರಾಧನಾ ಪರಂಪರೆಯೊಂದಿಗೆ ಅದಕ್ಕೆ ನೇರ ಸಂಬಂಧವಿದೆ. ಆದ್ದರಿಂದ ಸಮ್ಮೇಳನದ ಎರಡನೇ ದಿನ ಅಕ್ಟೋಬರ್ 4 ರಂದು ಬೆಳಿಗ್ಗೆ ‘ತುಳುನಾಡಿನ ಆರಾಧನಾ ಕಲೆ’ಗಳ ಬಗ್ಗೆ ಪ್ರತ್ಯೇಕ ಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಲೇಖಕ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ದೈವಾರಾಧನೆ ಕುರಿತು ವಿಚಾರ ಮಂಡಿಸಿದರು.ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣರು ಅದನ್ನು ವಿಸ್ತರಿಸುವುದರೊಂದಿಗೆ ಯಕ್ಷಾರಾಧನೆ ಕುರಿತು ಮಾತನಾಡಿದರು. ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ನಾಗಾರಾಧನೆ ಬಗ್ಗೆ ತುಳುವರ ನಂಬಿಕೆ ಮತ್ತು ಆಚರಣೆ ಬಗ್ಗೆ ಮಾತನಾಡಿ ಗೋಷ್ಠಿಯನ್ನು ಸಮನ್ವಯಗೊಳಿಸಿದರು.

೬. ಅಜೆಕಾರು ಕಲಾಭಿಮಾನಿ ಬಳಗವು ಕಳೆದ 25 ವರ್ಷಗಳಲ್ಲಿ ಮುಂಬೈಯಲ್ಲಿ ಕೇವಲ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆ ಸರಣಿಗಳನ್ನು ನಡೆಸಿದ್ದಲ್ಲ. ಅದರೊಂದಿಗೆ ಸುಮಾರು ಹದಿನೈದು ಗ್ರಂಥಗಳನ್ನು ಪ್ರಕಟಿಸಿದೆ. ಈ ಗ್ರಂಥಗಳ ಅವಲೋಕನಕ್ಕಾಗಿ ಸಮ್ಮೇಳನದಲ್ಲೊಂದು ವಿಶೇಷ ಗೋಷ್ಠಿ ನಡೆಯಿತು. ಇದರಲ್ಲಿ ಚಿಂತಕರಾದ ಭಾಸ್ಕರ ರೈ ಕುಕ್ಕುವಳ್ಳಿ (ಅಭಿನಂದನ ಮತ್ತು ಸಂಸ್ಮರಣ ಗ್ರಂಥಗಳು) ಮತ್ತು ಡಾ.ದಿನೇಶ್ ಶೆಟ್ಟಿ ರೆಂಜಾಳ (ಯಕ್ಷಗಾನ ಅರ್ಥ ಸಹಿತ ಪ್ರಸಂಗ ಕೃತಿಗಳು ಮತ್ತು ಇತರ ಪ್ರಕಟಣೆಗಳು) ವಿಷಯವಾಗಿ ಮಾತನಾಡಿದರು.

ಇದೇ ವೇಳೆ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಪಾದಿಸಿ ಮುಂಬಯಿ ವಿಶ್ವವಿದ್ಯಾನಿಲಯ ಪ್ರಕಟಿಸಿದ ಮುಂಬೈಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕುರಿತಾದ ‘ಯಕ್ಷ ರಜತ’ ಕೃತಿಯನ್ನು ಗ್ರಂಥ ಬಾಗಿನದ ರೂಪದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಅರ್ಪಿಸಲಾಯಿತು. ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್. ಉಪಾಧ್ಯ ಕೃತಿ ಪರಿಚಯ ನೀಡಿದರು.

೭. ಯಕ್ಷಗಾನ ರಂಗದಲ್ಲಿ ಭಾಗವತರ ಬಳಿಕದ ಸ್ಥಾನ ಹಾಸ್ಯಗಾರನದ್ದು. ಅದಕ್ಕಾಗಿ ‘ಯಕ್ಷಗಾನ ಹಾಸ್ಯ: ಅನ್ವಯ ಮತ್ತು ಪ್ರದರ್ಶನ’ ವಿಷಯವಾಗಿ ಪ್ರಯೋಗಾತ್ಮಕವಾದ ಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಕಲಾವಿದರಾದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮತ್ತು ಬಾಲಕೃಷ್ಣ ಮಣಿಯಾಣಿ (ಋತುಪರ್ಣ – ಬಾಹುಕ), ದಿವಾಕರ ರೈ ಸಂಪಾಜೆ ಮತ್ತು ಪ್ರಜ್ವಲ್ ಕುಮಾರ್ ಗುರುವಾಯನಕೆರೆ (ಶ್ರೀಕೃಷ್ಣ – ಮಕರಂದ), ಪ್ರಶಾಂತ ಶೆಟ್ಟಿ ನೆಲ್ಯಾಡಿ ಮತ್ತು ಮಹೇಶ್ ಮಣಿಯಾಣಿ (ಮಾಲಿನಿ – ದೂತ) ವಿವಿಧ ಪಾತ್ರಗಳ ಪ್ರಾತ್ಯಕ್ಷಿಕೆ ನೀಡಿದರು. ಈ ಸನ್ನಿವೇಶಗಳು ಪ್ರೇಕ್ಷಕರಿಗೆ ವಿಶೇಷ ಮನರಂಜನೆಯನ್ನೂ ನೀಡಿರುವುದು ಗಮನಾರ್ಹವೆನಿಸಿತು.

೮. ಸಮ್ಮೇಳನದ ಸಮಾರೋಪ ಸಮಾರಂಭದ ಮೊದಲು ನಡೆದ ಕೊನೆಯ ಮಹತ್ವದ ಗೋಷ್ಠಿ ‘ಯಕ್ಷಗಾನ ಸಂಘಟನೆ ಮತ್ತು ಕಲಾವಿದರ ಕ್ಷೇಮ ಚಿಂತನೆ’. ಇದರಲ್ಲಿ ಪಾವಂಜೆ ಮೇಳದ ಸಂಚಾಲಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾಳಕಟ್ಟೆ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಎಲ್ಲಾ ಗೋಷ್ಠಿಗಳು ಅರ್ಥಪೂರ್ಣವಾಗಿ ಜರಗಿದವು.

ಯಕ್ಷ ಪ್ರಯೋಗ – ಪ್ರದರ್ಶನಗಳು

ಎರಡೂ ದಿನ ನಡೆದ ತೆಂಕು ಬಡಗು ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರನ್ನು ವಿಶೇಷವಾಗಿ ರಂಜಿಸಿದವು. ದಿ. ಅಳಿಕೆ ರಾಮಯ್ಯ ರೈಯವರ ಹೆಸರಿನ ವಿಶಾಲ ಚೌಕಿಯಲ್ಲಿ ಪ್ರಸಾಧನ ಮತ್ತು ವೇಷಗಾರಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮೊದಲ ದಿನ ಉಡುಪಿಯ ‘ಥಿಯೇಟ‌ರ್ ಯಕ್ಷ’ ಬಳಗದಿಂದ ಪೃಥ್ವಿರಾಜ್ ಕವತ್ತಾರು ಅವರ ನಿರ್ದೇಶನದಲ್ಲಿ ತೆಂಕುತಿಟ್ಟಿನ ಸಂಕ್ಷಿಪ್ತ ಪೂರ್ವರಂಗ ಮತ್ತು ‘ಪಂಪಾತೀರ’ ಕಥಾನಕ ಪ್ರಸ್ತುತಿ, ದಿವಾಕರ ರೈ ಸಂಪಾಜೆ ಮತ್ತು ಪ್ರಶಾಂತ ಶೆಟ್ಟಿ ನೆಲ್ಯಾಡಿ ಅವರಿಂದ ಯಕ್ಷನಾಟ್ಯ, ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಲ್ಲಿ ‘ಬೀರಸಿರಿತ ಗಾಂಡೀವಿ’ ತುಳು ತಾಳಮದ್ದಳೆ, ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ‘ಚಕ್ರವ್ಯೂಹ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಜರಗಿತು.

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ಕೆ.ವಿ.ರಮೇಶ್ ನಿರ್ದೇಶನದಲ್ಲಿ ‘ನರಕಾಸುರ ಮೋಕ್ಷ’ ಯಕ್ಷಗಾನ ಗೊಂಬೆಯಾಟದೊಂದಿಗೆ ಮರುದಿನದ ಪ್ರದರ್ಶನಗಳು ಜರಗಿದವು.

ಸಮ್ಮೇಳನದ ಕೊನೆಯಲ್ಲಿ ತೆಂಕುತಿಟ್ಟಿನ ಆಯ್ದ ಪ್ರಸಿದ್ಧ ಮೇಳದ ಕಲಾವಿದರಿಂದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ‘ರುಕ್ಮಿಣಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಜರಗಿತು.

ಛಾಯಾಂಗಣ – ಜ್ಞಾನಾಂಗಣ:

ಸಮ್ಮೇಳನಾಂಗಣದಲ್ಲಿ ದಿ.ಶೇಖರ ಶೆಟ್ಟಿ ಇನ್ನಾ ಕಾಚೂರು ‘ಛಾಯಾಂಗಣ’ ವಿಭಾಗದಲ್ಲಿ ಮನೋಹರ ಎಸ್. ಕುಂದರ್ ಬಡಾ ಎರ್ಮಾಳು ಅವರಿಂದ ಅಪರೂಪದ ಯಕ್ಷಗಾನ ಛಾಯಾಚಿತ್ರಗಳ ಪ್ರದರ್ಶನ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ‘ಜ್ಞಾನಾಂಗಣ’ದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಪ್ರಕಟಣೆಗಳು ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು.

ಎರಡೂ ದಿನ ಸಂಜೆಯ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಲಾ ಗೌರವ, ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಮತ್ತು ಸಂಘ ಸಂಸ್ಥೆಗಳಿಗೆ ರಜತ ಗೌರವಾರ್ಪಣೆ ಜರಗಿತು. ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಪ್ರಧಾನ ಸಂಚಾಲಕ ಭಾಸ್ಕರ ಕುಕ್ಕುವಳ್ಳಿ ಮತ್ತು ವಿವಿಧ ಉಪಸಮಿತಿಗಳ ಉತ್ಸಾಹೀ ಕಾರ್ಯಕರ್ತರ ವಿಶೇಷ ಪರಿಶ್ರಮ ಸಮ್ಮೇಳನದುದ್ದಕ್ಕೂ ಎದ್ದು ತೋರುತ್ತಿತ್ತು. ಒಟ್ಟಿನಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಅಜೆಕಾರು ಕಲಾಭಿಮಾನಿ ಬಳಗದ ‘ರಜತ ಪರ್ವ’ಕ್ಕೆ ಕಳಸವಿಟ್ಟಂತೆ ಈ ಯಕ್ಷಗಾನ ಸಮ್ಮೇಳನ ಮುಂಬೈಯಲ್ಲಿ ‘ನ ಭೂತೋ’ ಎಂಬಂತೆ ಕಲಾಭಿಮಾನಿಗಳ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.


ಲಕ್ಷ್ಮೀನಾರಾಯಣ ರೈ ಹರೇಕಳ