ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಅ.17 ಮತ್ತು 18ರಂದು ಕೃಷಿ ಮತ್ತು ತೋಟಗಾರಿಕೆ ಮೇಳ- ಆಯೋಜಿಸಲಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣವರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17ರಂದು ಬೆಳಗ್ಗೆ 10.30ಕ್ಕೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿ. ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ ಎಂದರು.
ಮೇಳದಲ್ಲಿ 200 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಭತ್ತದ ಬಿಡುಗಡೆಯಾದ ತಳಿಗಳು ಮತ್ತು ಭತ್ತದ ಜಮ್ರ್ಪ್ಲಾಸಂ, ಭತ್ತದ ಬಿಜೋತ್ಪಾದನೆ ತಾಕುಗಳು, ವಿವಿಧ ತಳಿಗಳ ಅಡಿಕೆ, ತೆಂಗು, ಗೋಡಂಬಿ, ಮಾವು ಮತ್ತು ರಬ್ಬರ್ ಬೆಳೆಯ ಪ್ರಾತ್ಯಕ್ಷಿಕೆ ತಾಕುಗಳು, ತೆಂಗಿನ ತೋಟದಲ್ಲಿ ಚಕ್ಕೆ ಅಂತರ ಬೆಳೆಯಾಗಿ ಪ್ರಾತ್ಯಕ್ಷಿಕೆ ನೋಡಬಹುದು. ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳು, ಬೀಜಗಳು, ಸಸಿಗಳ ಪ್ರದರ್ಶನ ಹಾಗೂ ಮಾರಾಟದ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ರೈತರ ಹಿತದೃಷ್ಟಿಯಿಂದ ಒಟ್ಟು 4 ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಬ್ರಹ್ಮಾವರ ಮತ್ತು ಉಳ್ಳಾಲ ಕೃಷಿ ಕೇಂದ್ರಗಳು ಈ ವರ್ಷದಲ್ಲಿ ಒಟ್ಟು 6 ತಂತ್ರಜ್ಞಾನಗಳನ್ನು ರೈತರಿಗೆ ಶಿಫಾರಸ್ಸು ಮಾಡಲು ತಾಂತ್ರಿಕ ಅನುಮೋದನೆಯನ್ನು ಪಡೆದಿವೆ. ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಮಾದರಿಯಾಗಿರುವ 6 ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ರೈತರಿಗೆ ಉಪಯೋಗವಾಗುವ 7 ತಾಂತ್ರಿಕ ಕೈಪಿಡಿಗಳನ್ನು ವಿವಿಧ ಗಣ್ಯರು ಬಿಡುಗಡೆ ಮಾಡಲಿದ್ದಾರೆ ಎಂದರು.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 2014 ರಲ್ಲಿ ಸ್ಥಾಪನೆಗೊಂಡ ಬ್ರಹ್ಮಾವರದಲ್ಲಿರುವ ಏಕೈಕ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜು 12 ವರ್ಷದಿಂದ ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣ ನುರಿತ ವಿಜ್ಞಾನಿಗಳಿಂದ ಒದಗಿಸುತ್ತಾ ಅಭಿವೃದ್ಧಿ ಹೊಂದುತ್ತಿದೆ. ಈ ಕಾಲೇಜಿನಲ್ಲಿ ಪ್ರಸ್ತುತ 85 ವಿದ್ಯಾರ್ಥಿಗಳು ಕೃಷಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 314 ವಿದ್ಯಾರ್ಥಿಗಳು ಪದವಿ ಪಡೆದ ನಂತರ ಹೆಚ್ಚಿನ ವಿದ್ಯಾಭ್ಯಾಸ ಮತ್ತು ಕೃಷಿ ಸೇವೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕೃಷಿ ಮಳಿಗೆ ಸಮಿತಿಯ ಅಧ್ಯಕ್ಷ ಡಾ. ಎನ್. ಈ. ನವೀನ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸುಧೀರ್ ಕಾಮತ್, ಪ್ರಾಂಶುಪಾಲ ಡಾ. ರವಿರಾಜ್ ಶೆಟ್ಟಿ, ಹಿರಿಯ ವಿಜ್ಞಾನಿ ಡಾ. ಎಚ್. ಆರ್. ಭೂಮಿಕಾ ಉಪಸ್ಥಿತರಿದ್ದರು.

