ಬೆಂಗಳೂರು : ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಲೋಕಸಭಾ ಸದಸ್ಯೆ ಹಾಗೂ ಪಕ್ಷದ ಸಂಸದೀಯ ಮಂಡಳಿಯ ಸದಸ್ಯೆ ಡಾ. ಸುಧಾ ಯಾದವ್ ಅವರು ಇಂದು (ಅ.16) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಕಾರ್ಯಕ್ರಮಕ್ಕೆ ಲೋಕಭವನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯಾಗಿರುವ ಡಾ. ಸುಧಾ ಯಾದವ್ ಅವರು ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ಮಾಜಿ ಲೋಕಸಭಾ ಸದಸ್ಯೆಯಾಗಿ ಹಾಗೂ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಥಾವರ್ಚಂದ್ ಗೆಹ್ಲೋಟ್ ಅವರ ಉತ್ತರಾಧಿಕಾರಿಯಾಗಿ ಕರ್ನಾಟಕದ ರಾಜ್ಯಪಾಲರ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇದೇ ವೇಳೆ, ಸುಮಾರು ಐದು ವರ್ಷಗಳ ಕಾಲ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಲೋಕಭವನದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ತಮ್ಮ ಭಾಗ್ಯ ಎಂದು ತಿಳಿಸಿದರು. ರಾಜ್ಯದ ನೆಲ ಮತ್ತು ಜನರಿಂದ ಸಾಕಷ್ಟು ಕಲಿತಿದ್ದೇನೆ ಎಂದ ಅವರು, ತಮ್ಮ ಕಾರ್ಯಾವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಡಾ. ಸುಧಾ ಯಾದವ್ ಅವರ ನೇಮಕದೊಂದಿಗೆ ಕರ್ನಾಟಕದ ರಾಜ್ಯಪಾಲರಾಗಿ ಹೊಸ ಅಧ್ಯಾಯ ಆರಂಭವಾಗಲಿದ್ದು, ಇಂದು ನಡೆಯಲಿರುವ ಪ್ರಮಾಣವಚನ ಸಮಾರಂಭದತ್ತ ಎಲ್ಲರ ಗಮನ ನೆಟ್ಟಿದೆ.

