ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮ ಇದೀಗ ಜನರ ದೈನಂದಿನ ಆಹಾರ ಪದಾರ್ಥಗಳ ಮೇಲೂ ಬೀಳತೊಡಗಿದೆ. ಪ್ರಮುಖ ಆಹಾರವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಕಷ್ಟು ಪ್ರಮಾಣದಲ್ಲಿ ಭತ್ತದ ಉತ್ಪಾದನೆಯಾಗದಿರುವುದು ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕಳೆದ ತಿಂಗಳು ಸಾಮಾನ್ಯ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯ 25 ಕೆ.ಜಿ. ಚೀಲಕ್ಕೆ ₹1,500ರಿಂದ ₹1,600ರವರೆಗೆ ದರವಿತ್ತು. ಆದರೆ ಅಕ್ಟೋಬರ್ 1ರಿಂದ ಬೆಲೆಯಲ್ಲಿ ₹300ರಿಂದ ₹400ರವರೆಗೆ ಏರಿಕೆಯಾಗಿದ್ದು, ಇದೀಗ 25 ಕೆ.ಜಿ. ಚೀಲದ ಬೆಲೆ ಸರಾಸರಿ ₹2,000ಕ್ಕೆ ತಲುಪಿದೆ. ಸೋನಾ ಮಸೂರಿ ಅಕ್ಕಿಯ ಚಿಲ್ಲರೆ ಬೆಲೆ ಕೆ.ಜಿ.ಗೆ ₹75ರಿಂದ ₹80ರವರೆಗೆ ಇದೆ. ಇನ್ನು ಜೀರಾ, ಕೋಲಂ, ಬಾಸುಮತಿ ಮತ್ತು ರಾಜಮುಡಿ ಸೇರಿದಂತೆ ಇತರ ತಳಿಯ ಅಕ್ಕಿಗಳ ಬೆಲೆಯೂ ಕೆ.ಜಿ.ಗೆ ಸರಾಸರಿ ₹120ರಿಂದ ₹150 ಮೀರಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ ₹2,200ರಿಂದ ₹2,400ರವರೆಗೆ ಬೆಲೆ ಇತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಇಳುವರಿ ಕುಸಿದಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸೋನಾ ಮಸೂರಿ ಅಕ್ಕಿಯ ದರ ಕ್ವಿಂಟಲ್ಗೆ ₹6,000ರಿಂದ ₹8,000ಕ್ಕೆ, ಆರ್ಎನ್ಆರ್ ಮತ್ತು ಸ್ಟೀಮ್ ರೈಸ್ ದರ ₹6,500ರಿಂದ ₹8,500ಕ್ಕೆ ಹಾಗೂ ಕೋಲಂ ಅಕ್ಕಿಯ ದರ ₹7,500ರಿಂದ ₹10,000ಕ್ಕೆ ಏರಿಕೆಯಾಗಿದೆ.
ಅಕ್ಕಿಯಷ್ಟೇ ಅಲ್ಲದೆ, ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆಗೂ ಮಳೆಯ ಕೊರತೆ ಪ್ರಮುಖ ಕಾರಣವಾಗಿದೆ. ಕೃಷಿ ಉತ್ಪಾದನೆ ಕುಸಿದರೆ ಮಾರುಕಟ್ಟೆಯಲ್ಲಿ ಪೂರೈಕೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ನೇರ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ಅಕ್ಕಿಯ ದರ ಏರಿಕೆ ಮತ್ತಷ್ಟು ಹೊರೆಯಾಗಿದೆ.
ಬೆಲೆ ಏರಿಕೆಗೆ ಕಡಿವಾಣ ಯಾವಾಗ?
ಮಳೆಯ ಅಭಾವ ಹಾಗೂ ಕೃಷಿ ಉತ್ಪಾದನೆಯಲ್ಲಿನ ಕುಸಿತ ಇದೇ ರೀತಿ ಮುಂದುವರಿದರೆ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಏರುವ ಆತಂಕ ಎದುರಾಗಿದೆ. ಅಕ್ಕಿಯಂತಹ ಅಗತ್ಯ ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದ ಕಡಿಮೆ ಆದಾಯದ ಕುಟುಂಬಗಳು ತಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಕ್ಕಿಯ ಸಮರ್ಪಕ ಪೂರೈಕೆ ಖಚಿತಪಡಿಸುವುದು, ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಹಾಗೂ ಅಗತ್ಯವಿರುವವರಿಗೆ ಆಹಾರ ಧಾನ್ಯಗಳು ಕೈಗೆಟುಕುವ ದರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

