ಸುರತ್ಕಲ್: ಎಂಆರ್ಪಿಎಲ್ನಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭಾರೀ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾರೆ. ಸುರತ್ಕಲ್ನ ಇಡ್ಯಾ ಗ್ರಾಮದ ಕಾನ ನಿವಾಸಿ ರಾಜೇಶ್ ಡಿಸಿಲ್ವ (Rajesh D’Silva) ಮೃತಪಟ್ಟವರು ಎಂದು ತಿಳಿದುಬಂದಿದೆ.
ರಾಜೇಶ್ ಡಿಸಿಲ್ವ ಅವರು ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 30ರಂದು ಎಂಆರ್ಪಿಎಲ್ನ ಫೇಸ್–3 ವಿಭಾಗದ CHTU ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಅವರು ಗಂಭೀರ ಸುಟ್ಟಗಾಯಗಳಿಗೆ ಒಳಗಾಗಿದ್ದರು. ತಕ್ಷಣ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ದುರ್ಘಟನೆಯಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ಅವರು ಚಿಕಿತ್ಸೆ ಪಡೆಯುತ್ತಿದ್ದರೂ, ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.

