ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ

0
6

ಬೆಂಗಳೂರು : ಎಪಿಎಸ್ ಕಾಮರ್ಸ್ ಕಾಲೇಜಿನಲ್ಲಿ ಪ್ರತಿಭಾ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ಆತ್ಮವಿಶ್ವಾಸ, ಕಲಾತ್ಮಕ ಸಾಮರ್ಥ್ಯಗಳು ಹಾಗೂ ವೈವಿಧ್ಯಮಯ ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆಯಾಗಿತ್ತು., ನಟ ಶ್ರೀನಾಥ್ ವಸಿಷ್ಠ ಹಾಗೂ ಖ್ಯಾತ ಗಾಯಕಿ ಜೋಗಿ ಸುನಿತಾ ಭಾಗಿಯಾಗಿದ್ದು, ಕಾರ್ಯಕ್ರಮಕ್ಕೆ ಮೆರುಗು ಮತ್ತು ಉತ್ಸಾಹ ಹೆಚ್ಚಿಸಿತು.

ಎಪಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಶಿಕ್ಷಣ ಕೇವಲ ಜ್ಞಾನವನ್ನಷ್ಟೇ ಅಲ್ಲದೆ ಪ್ರತಿಭೆ, ಶಿಸ್ತು ಮತ್ತು ವ್ಯಕ್ತಿತ್ವವನ್ನು ಬೆಳೆಸಬೇಕು. ಸಾಧನೆಗೆ ಎಂದೂ ಮಿತಿ ವಿಧಿಸಬಾರದು. ತಾತ್ಕಾಲಿಕ ಯಶಸ್ಸಿಗಾಗಿ ನಿಮ್ಮ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಪ್ರಾಮಾಣಿಕತೆ, ನೈತಿಕತೆ ಮತ್ತು ಉತ್ತಮ ವ್ಯಕ್ತಿತ್ವವೇ ಶಾಶ್ವತ ಸಾಧನೆಯ ಅಡಿಪಾಯಗಳು ಎಂದರು.

ನಟ ಶ್ರೀನಾಥ್ ವಸಿಷ್ಠ ಮಾತನಾಡಿ, ಎಪಿಎಸ್‌ನೊಂದಿಗಿನ ತಮ್ಮ ನಂಟನ್ನು ಹಾಗೂ ಈ ಸಂಸ್ಥೆಯನ್ನು ನೆನಪಿಸಿಕೊಳ್ಳಲು ಇರುವ ಅನೇಕ ಕಾರಣಗಳನ್ನು ಆತ್ಮೀಯವಾಗಿ ಸ್ಮರಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎಪಿಎಸ್ ಸಂಸ್ಥೆಯ ಬದ್ಧತೆಯನ್ನು ಶ್ಲಾಘಿಸಿದರು. ಯುವ ಮನಸ್ಸಿನಲ್ಲಿರುವ ಅಡಗಿದ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಹಾಗೂ ಹೊರತರುವ ಮಹತ್ವವನ್ನು ಅವರು ಒತ್ತಿಹೇಳಿದರು. ಶಿಕ್ಷಣ ಸಂಸ್ಥೆಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಕಂಡುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು. ಗಾಯಕಿ ಜೋಗಿ ಸುನಿತಾ ಗಾಯನ ಗಮನ ಸೆಳೆಯಿತು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ವಿ. ಗೌತಮ, ಜಂಟಿ ಕಾರ್ಯದರ್ಶಿ ಎ. ರಾಮಪ್ರಸಾದ್ ಹಾಗೂ ಪ್ರಾಂಶುಪಾಲರಾದ ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.