ಉಡುಪಿ ಶ್ರೀಕೃಷ್ಣ ಮಠದಲ್ಲಿ ನವರಾತ್ರಿ ವೈಭವ : ರಾಜಾಂಗಣದಲ್ಲಿ ಧಾರ್ಮಿಕ ಸಭೆ ಹಾಗೂ ರಂಗೇರಿದ ಸಾಂಸ್ಕೃತಿಕ ಹಬ್ಬ

0
36

ಉಡುಪಿ : ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ (ಅಕ್ಟೋಬರ್ 16, 2026) ನವರಾತ್ರಿಯ ಮಹೋತ್ಸವದ 6ನೇ ದಿನದ ಅಂಗವಾಗಿ ಮಾತೆ ಶ್ರೀ ಕಾತ್ಯಾಯಿನಿ ದೇವಿ ಆರಾಧನೆಯೊಂದಿಗೆ ಧಾರ್ಮಿಕ ಸಭೆ ಹಾಗೂ ವೈಭವದ ಭಕ್ತಿ ಸಾಂಗೀತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಡಗರದಿಂದ ಜರುಗಿದವು.

ಬೆಳಿಗ್ಗಿನ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಭಜನೆ

ಬೆಳಿಗ್ಗೆ 9:00 ಗಂಟೆಗೆ ಅಂಬಲಪಾಡಿಯ ಜಯಲಕ್ಷ್ಮೀ ಎನ್. ಅಮೀನ್ ದಂಪತಿಗಳ ಸೇವಾರ್ಥವಾಗಿ ಶ್ರೀದುರ್ಗಾ ಹೋಮ ಅತ್ಯಂತ ಭಕ್ತಿಪ್ರಹರ್ಷದಿಂದ ಸಂಪನ್ನಗೊಂಡಿತು. ತದನಂತರ ಹಗಲಿಡೀ ನಡೆದ ಭಜನಾ ಸೇವೆ ಭಕ್ತರ ಮನ ಸೆಳೆಯಿತು. ಬೆಳಿಗ್ಗೆ 10:00 ರಿಂದ 12:00 ರವರೆಗೆ ದೊಡ್ಡಣಗುಡ್ಡೆಯ ಆಂಜನೇಯ ಭಜನಾ ಮಂಡಳಿ, ಮಧ್ಯಾಹ್ನ 12:00 ರಿಂದ 2:00 ರವರೆಗೆ ಪಲಿಮಾರಿನ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5:00 ರವರೆಗೆ ದೊಡ್ಡಣಗುಡ್ಡೆಯ ಆದಿಶಕ್ತಿ ಭಜನಾ ಮಂಡಳಿಯವರಿಂದ ಸುಮಧುರ ಭಜನಾ ಕಾರ್ಯಕ್ರಮ ಜರುಗಿತು.

ಧಾರ್ಮಿಕ ಸಭೆ ಮತ್ತು ಆಶೀರ್ವಚನ

ಸಂಜೆ 5:30ಕ್ಕೆ ಜರುಗಿದ ಭವ್ಯ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, “ಮಾ ಕಾತ್ಯಾಯಿನಿಯ ಆರಾಧನೆಯು ನಮ್ಮ ಸಮಾಜದಲ್ಲಿ ಸತ್ಚಿಂತನೆ ಮತ್ತು ಜ್ಞಾನದ ಬೆಳಕನ್ನು ತುಂಬಲಿ,” ಎಂದು ಹರಸಿದರು. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ದಸರಾ ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಪು ಹೊಸ ಮಾರಿಗುಡಿಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೈದರಾಬಾದ್‌ನ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಅವರು ಶುಭ ಶಂಸನೆಗೈದರು.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ

ಮುಖ್ಯ ಅತಿಥಿಗಳಾಗಿ ಉಡುಪಿ ಗಾಂಧಿ ಹಾಸ್ಪಿಟಲ್ ನಿರ್ದೇಶಕರಾದ ಹರಿಶ್ಚಂದ್ರ ರಾವ್, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಪಡುಬಿದ್ರಿ SEZ ಜನರಲ್ ಮ್ಯಾನೇಜರ್ ಅಶೋಕ ಶೆಟ್ಟಿ, ಕೋಟ ಆಶ್ರಿತ ಕಾಲೇಜು ಆಫ್ ನರ್ಸಿಂಗ್‌ನ ಡಾ| ವಿದ್ಯಾಧರ್ ಶೆಟ್ಟಿ ಹಾಗೂ ಯುವ ಉದ್ಯಮಿ ಮಿಥುನ್ ಆರ್. ಹೆಗ್ಡೆ ಉಪಸ್ಥಿತರಿದ್ದರು.

ಅಲ್ಲದೆ ಉದ್ಯಮಿಗಳಾದ ಆನಂದ್ ಕಾರ್ನಾಡ್, ವಿಶ್ವನಾಥ ಶೆಟ್ಟಿ (ಬಳ್ಳಾರಿ), ನಗರಸಭೆ ಮಾಜಿ ಅಧ್ಯಕ್ಷ ಟಿ.ಜಿ. ಹೆಗ್ಡೆ, ಡಾ| ಶಿವಾನಂದ ನಾಯಕ್, ಕಲ್ಕೂರ ಬಿಲ್ಡರ್ಸ್ ಎಂ.ಡಿ. ರಂಜನ್ ಕಲ್ಕೂರ, ಶ್ರೀಕೃಷ್ಣ ಕ್ಯಾಟರರ್ಸ್‌ನ ಶ್ರೀಧರ್ ಭಟ್, ಸಿವಿಲ್ ಇಂಜಿನಿಯರ್ ಸಂತೋಷ್ ಅಮೀನ್, ಸುದರ್ಶನ್ ಶೇರಿಗಾರ್ (ಬೈಲೂರು), ಉದ್ಯಮಿ ಶಿವಾನಂದ್ ಶೆಟ್ಟಿ (ಹಳಿಯಾಳ), ನ್ಯಾಯವಾದಿ ಯಡಾಡಿ ಸಂದೇಶ್ ಶೆಟ್ಟಿ, ಗುತ್ತಿಗೆದಾರರಾದ ವಿಜಯಾನಂದ ಶೆಟ್ಟಿ ಹಾಗೂ ತಾರಾ ಯು. ಆಚಾರ್ಯ ಮೊದಲಾದ ಗಣ್ಯರು ಭಾಗವಹಿಸಿದ್ದರು.

ರಾಜಾಂಗಣದಲ್ಲಿ ರಂಗೇರಿದ ‘ನೃತ್ಯ-ಸಂಗೀತ-ಸಂಭ್ರಮ’

ರಾತ್ರಿ 7:00 ಗಂಟೆಗೆ ಆರಂಭವಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪುಷ್ಪ ಪ್ರಸಾದ್ ಅವರು ಅತ್ಯಂತ ಚೇತೋಹಾರಿಯಾಗಿ ನಡೆಸಿಕೊಟ್ಟರು. ಸಾಂಸ್ಕೃತಿಕ ವೈಭವದಲ್ಲಿ ಬೆಂಗಳೂರಿನ ಡಾ| ವಿದ್ಯಾಲಕ್ಷ್ಮೀ ಎಂ. ಎಸ್. ಮತ್ತು ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ತಂಡದವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ವಿದುಷಿ ಚೈತ್ರ ಶೆಣೈರವರಿಂದ ಕಾಳಿಂಗ ನರ್ತನ, ಸನ್ನಿಧಿ ಎಸ್ ರವರಿಂದ ಗಣೇಶ ಕೌತ್ವಂ, ಸುಶ್ಮಿತಾ ಭಟ್, ಪೂಜಾ ಬೆಂಗಳೂರು ಹಾಗೂ ಶ್ರೀ ಹರ್ಷ ತೋಡ್ತಿಲ್ಲಾಯ ಅವರ ನೃತ್ಯ ಕೌಶಲ್ಯ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತು.

ಗಾಯನ ವಿಭಾಗದಲ್ಲಿ ಸುಷ್ಮಾ ಬೀಜಾಡಿ, ಸಾದ್ದಿ ಶೆಟ್ಟಿ ಮತ್ತು ಶಾಂಭವಿ ಸತೀಶ್, ಜಯಕರ ಮಲ್ಪೆ, ಚಿದಾನಂದ ಪೂಜಾರಿ ಅವರ ದೇವೀ ಸ್ತುತಿಗಳ ಸುಶ್ರಾವ್ಯ ಕಂಠಸಿರಿಗೆ ಕಲಾಭಿಮಾನಿಗಳು ತಲೆದೂಗಿದರು. ಉಡುಪಿಯ ಶಾಂಭವಿ ಸತೀಶ್ ಮತ್ತು ತಂಡದವರಿಂದ ಮೂಡಿಬಂದ ಭವ್ಯ ‘ನೃತ್ಯ’ವು ಪ್ರದರ್ಶನಕ್ಕೆ ವಿಶೇಷ ಕಳೆಯನ್ನು ತಂದುಕೊಟ್ಟಿತು (ಈ ತಂಡದಲ್ಲಿ ಶಾoಭವಿ, ಪುಷ್ಪ ಪ್ರಸಾದ್, ಸುಲೋಚನಾ, ವೀಣಾ, ಯಶೋದಾ, ತೇಜಸ್ವಿನಿ, ಶೋದಾಕ್ಷಿ, ಉಷಾ, ಸುಪ್ರೀತ ಹಾಗೂ ಪ್ರವೀಣ್ ಕುಮಾರ್ ಭಾಗವಹಿಸಿದ್ದರು. ಈ ನೃತ್ಯ ರೂಪಕದ ನಿರ್ದೇಶನವನ್ನು ವಾಸುದೇವ್ ಆಚಾರ್ಯ ಇವರು ಮಾಡಿರುತ್ತಾರೆ.) ಭಾಗವಹಿಸಿದ ಕಲಾವಿದರನ್ನು ಮಠದ ವತಿಯಿಂದ ಶಾಲು ಹಾಕಿ ಗೌರವಿಸಿ, ಆಶೀರ್ವದಿಸಲಾಯಿತು. ಭಕ್ತಿ, ಜ್ಞಾನ ಮತ್ತು ಕಲೆಯ ಅಪೂರ್ವ ತ್ರಿವೇಣಿ ಸಂಗಮದೊಂದಿಗೆ ಶ್ರೀಕೃಷ್ಣ ಮಠದ ನವರಾತ್ರಿ ಸಾಂಸ್ಕೃತಿಕ ವೈಭವವು ಯಶಸ್ವಿಯಾಗಿ ಸಂಪನ್ನಗೊಂಡಿತು.