ಉಡುಪಿ : ವಿಶ್ವವಿಖ್ಯಾತ ಮೈಸೂರು ದಸರಾ–2026ರ ವಿಜಯದಶಮಿ ಮೆರವಣಿಗೆಯಲ್ಲಿ ಕರಾವಳಿಯ ಜನಪದ ಕಲೆಯಾದ ಕಂಗಿಲು ನೃತ್ಯವನ್ನು ಪ್ರದರ್ಶಿಸಲು ಉಡುಪಿಯ ಶ್ರೀ ರಾಮ್ ಡ್ಯಾನ್ಸ್ ಅಕಾಡೆಮಿ ಆ್ಯಂಡ್ ಇವೆಂಟ್ ಮ್ಯಾನೇಜ್ಮೆಂಟ್ ತಂಡ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕಲಾತಂಡಕ್ಕೆ ತುಳುನಾಡಿನ ಹೆಮ್ಮೆಯ ಸಂಕೇತವಾದ ಸೂರ್ಯ–ಚಂದ್ರರ ಚಿಹ್ನೆಯುಳ್ಳ ಬಾವುಟ ಹಾಗೂ ಶಾಲು ನೀಡಿ ಗೌರವಿಸುವುದರೊಂದಿಗೆ, ಮೈಸೂರು ದಸರಾ ಪ್ರದರ್ಶನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ನೂತನ ಸಮವಸ್ತ್ರವನ್ನು ಅನಾವರಣಗೊಳಿಸಿ ಶುಭ ಹಾರೈಸಲಾಯಿತು.
ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಅವರು ಕಲಾತಂಡಕ್ಕೆ ತುಳುನಾಡಿನ ಬಾವುಟ ಹಸ್ತಾಂತರಿಸಿ, ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ದಸರಾ–2026ರ ಪ್ರದರ್ಶನಕ್ಕಾಗಿ ಸಿದ್ಧಪಡಿಸಲಾದ ನೂತನ ಸಮವಸ್ತ್ರವನ್ನು ಅನಾವರಣಗೊಳಿಸಿ ತಂಡದ ಸಾಧನೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫ್ರಾಂಕಿ ಡಿಸೋಜ ಅವರು, “ಉಡುಪಿಯಿಂದ ಮೈಸೂರಿಗೆ ಕರಾವಳಿಯ ಕಲೆಗೆ ರಾಜಮರ್ಯಾದೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ. ವಿಶ್ವವಿಖ್ಯಾತ ಮೈಸೂರು ದಸರಾ ವೇದಿಕೆಯಲ್ಲಿ ತುಳುನಾಡಿನ ಮಣ್ಣಿನ ಸೊಗಡಿನ ಕಂಗಿಲು ನೃತ್ಯ ಪ್ರದರ್ಶನಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಮೈಸೂರಿನ ಅರಮನೆ ಆವರಣ ಹಾಗೂ ರಾಜಬೀದಿಗಳಲ್ಲಿ ನಮ್ಮ ಜನಪದ ಕಲೆಯ ವೈಭವ ಅನಾವರಣಗೊಳ್ಳಲಿದೆ. ತುಳುನಾಡಿನ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಶ್ರೀ ರಾಮ್ ಡ್ಯಾನ್ಸ್ ಅಕಾಡೆಮಿ ತಂಡಕ್ಕೆ ಅಭಿನಂದನೆಗಳು. ಈ ತಂಡವು ಮುಂದೆಯೂ ದೇಶ-ವಿದೇಶಗಳಲ್ಲಿ ತುಳುನಾಡಿನ ಕೀರ್ತಿಯನ್ನು ಪಸರಿಸಲಿ” ಎಂದು ಹಾರೈಸಿದರು.
ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಕಲೆಯನ್ನು ವಿಶಾಲ ವೇದಿಕೆಗಳಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಪ್ರದರ್ಶನಗಳು ಮಹತ್ವದ ಪಾತ್ರ ವಹಿಸಲಿವೆ. ಮೈಸೂರು ದಸರಾ ಉತ್ಸವದಲ್ಲಿ ಕಂಗಿಲು ನೃತ್ಯದ ಮೂಲಕ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಲು ಹೊರಟಿರುವ ತಂಡಕ್ಕೆ ತುಳುನಾಡ ರಕ್ಷಣಾ ವೇದಿಕೆಯು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿತು.
ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮನೋಜ್ ಕೆ.ಜಿ. ರೋಡ್, ರತ್ನಾಕರ್ ಹಾಗೂ ಶ್ರೀ ರಾಮ್ ಡ್ಯಾನ್ಸ್ ಅಕಾಡೆಮಿಯ ಪುನೀತ್ ಉಪಸ್ಥಿತರಿದ್ದರು.

