
ಉಮೇಶ ಮುಂಡಳ್ಳಿ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸುಮಧುರ ಸಂಗೀತ ಸುಧೆ; ಕಲಾವಿದರಿಗೆ ದೇವಸ್ಥಾನದ ವತಿಯಿಂದ ಸನ್ಮಾನ
ಭಟ್ಕಳ : ಶರನ್ನವರಾತ್ರಿ ಉತ್ಸವದ ಒಂಬತ್ತನೇ ದಿನವಾದ ಅಕ್ಟೋಬರ್ 19ರ ಸೋಮವಾರ, ಭಟ್ಕಳ ತಾಲೂಕಿನ ವೆಂಕಟಾಪುರ ಬಪ್ಪುಂಡ ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಿನಾದ ಕಲ್ಚರಲ್ ಅಕಾಡೆಮಿ, ಭಟ್ಕಳದ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನೇತೃತ್ವದಲ್ಲಿ ನಿನಾದ ಭಾವಗಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರು ಭಾವಗೀತೆ, ತತ್ವಪದ, ಭಕ್ತಿಗೀತೆ ಸೇರಿದಂತೆ ವಿವಿಧ ಪ್ರಕಾರದ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು. ಅವರ ಗಾಯನಕ್ಕೆ ನಿನಾದ ಉಮೇಶ ,ಸುದರ್ಶನ್ ಮೇಸ್ತ ಮತ್ತು ಉತ್ಥಾನ ಉಮೇಶ ಸಹಗಾಯನದ ಮೂಲಕ ಸಾಥ್ ನೀಡಿದರು.

ವಾದ್ಯಸಂಗೀತದಲ್ಲಿ ಉಡುಪಿ ಜಿಲ್ಲೆಯ ಹಿರಿಯ ಕಲಾವಿದ ಉಮೇಶ ಶಿರೂರು ಅವರು ಹಾರ್ಮೋನಿಯಂನಲ್ಲಿ ಹಾಗೂ ಶ್ಯಾಮ್ ಶಿರೂರು ಅವರು ರಿದಂ ಪ್ಯಾಡ್ನಲ್ಲಿ ಸಹಕರಿಸಿ ಗಾಯನಕ್ಕೆ ಮತ್ತಷ್ಟು ಮೆರುಗು ನೀಡಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಂಗೀತ ಕಾರ್ಯಕ್ರಮವು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಭಕ್ತಿಭಾವ ಹಾಗೂ ಸಂಗೀತದ ಸೊಬಗಿನಿಂದ ಕಂಗೊಳಿಸಿದ ಕಾರ್ಯಕ್ರಮವು ಶರನ್ನವರಾತ್ರಿ ಉತ್ಸವದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದ ಅಂತ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಶ್ರೀಧರ ನಾಯ್ಕ ಅವರು ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
