ತುಳು ಭಾಷೆಯಲ್ಲಿ ಭಗವದ್ಗೀತೆ ಪ್ರಕಟ

0
11

ಮಂಗಳೂರು : ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯ ದಿಸೆಯಲ್ಲಿ ಮಹತ್ವದ ಮೈಲಿಗಲ್ಲಾಗಿ ತುಳು ಭಗವದ್ಗೀತೆ ಪ್ರಕಟಗೊಂಡಿದೆ. ಇಸ್ಕಾನ್ ಸಂಸ್ಥೆ ಹಾಗೂ ಐಲೇಸಾ ಸಂಘಟನೆಯ ಸಹಯೋಗದಲ್ಲಿ ಸಿದ್ಧಗೊಂಡಿರುವ ತುಳು ಭಗವದ್ಗೀತೆಯನ್ನು ಅಕ್ಟೋಬರ್ 18, 2026ರ ಭಾನುವಾರ ಮಂಗಳೂರಿನ ಕುಳಾಯಿಯ ಇಸ್ಕಾನ್ ಕೇಂದ್ರದಲ್ಲಿ ಕೇಮಾರು ಸ್ವಾಮೀಜಿಯವರ ದಿವ್ಯಹಸ್ತದಿಂದ ಬಿಡುಗಡೆಗೊಳಿಸಲಾಯಿತು.

2021ರಲ್ಲಿ ಇಸ್ಕಾನ್ ಸಹಯೋಗದಲ್ಲಿ ನಡೆದ ‘ತುಳುವ ಜಾಲ್ಡ್ ಕೃಷ್ಣ ಪಾರ್ದನ’ ಭಾಗವತ ಸಪ್ತಾಹದ ಸಂದರ್ಭದಲ್ಲಿ ತುಳು ಭಾಷೆಯಲ್ಲೂ ಭಗವದ್ಗೀತೆಯನ್ನು ಪ್ರಕಟಿಸಬೇಕೆಂಬ ಅಭಿಲಾಷೆ ಮೂಡಿತ್ತು. ಇಸ್ಕಾನ್‌ನ ಭಗವದ್ಗೀತೆ ಈಗಾಗಲೇ ನಾಲ್ಕು ದ್ರಾವಿಡ ಭಾಷೆಗಳಲ್ಲಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ, ತುಳು ಭಾಷೆಯಲ್ಲಿಯೂ ಭಗವದ್ಗೀತೆ ಲಭ್ಯವಾಗಬೇಕು ಎಂಬ ಆಶಯವನ್ನು ಐಲೇಸಾ ಸಂಘಟನೆ ಹೊಂದಿತ್ತು. ಇದೀಗ ಆ ಕನಸು ನನಸಾಗಿದ್ದು, ತುಳುವರಿಗೆ ತಮ್ಮ ಮಾತೃಭಾಷೆಯಲ್ಲಿ ಭಗವದ್ಗೀತೆಯ ಸಂದೇಶವನ್ನು ತಿಳಿಯಲು ಅವಕಾಶ ಲಭಿಸಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರೇರಣೆಯಾಗಿ ನಿಂತವರು ಐಲೇಸಾದ ಬೆನ್ನೆಲುಬಾಗಿರುವ ಸರ್ವೋತ್ತಮ ಶೆಟ್ಟಿ. ಈ ಸಾಧನೆಯ ಸಂಪೂರ್ಣ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಐಲೇಸಾ ಸಂಘಟನೆಯ ಪರವಾಗಿ ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಉಮಾನಾಥ ಕೋಟ್ಯಾನ್, ಡಾ. ಸತೀಶ್ ಭಂಡಾರಿ ಹಾಗೂ ಡಾ. ಸಾಯಿಗೀತಾ ಹೆಗ್ಡೆ ಅವರು ಈ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.

ತುಳು ಭಗವದ್ಗೀತೆಯ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡ ಚಂದ್ರಾವತಿ, ಕೃಷ್ಣದಾಸ, ಶ್ರೀವಲ್ಲಿ ರೈ, ರವಿತೇಜ ಗೌರಂಗದಾಸ್, ವಚನ ರೂಪಕಲಾ ಆಳ್ವ, ಯಶೋದಾ ಮೋಹನ್ ಹಾಗೂ ತ್ರಿವಿಕ್ರಮ ಪ್ರಸಾದೇಶ್ವರ ಅವರ ಪರಿಶ್ರಮವನ್ನು ಸಂಘಟನೆ ಶ್ಲಾಘಿಸಿದೆ. ಈ ಮಹತ್ವದ ಕಾರ್ಯದ ಹಿಂದೆ ಸದ್ದಿಲ್ಲದೆ ಶ್ರಮಿಸಿದ ಐಲೇಸಾದ ಎಲ್ಲ ಸದಸ್ಯರ ಕೊಡುಗೆಯನ್ನೂ ಸ್ಮರಿಸಲಾಗಿದೆ.

ಭಗವದ್ಗೀತೆಯ ತತ್ವಜ್ಞಾನ ಮತ್ತು ಜೀವನಮೌಲ್ಯಗಳನ್ನು ತುಳು ಭಾಷೆಯ ಮೂಲಕ ಜನರಿಗೆ ತಲುಪಿಸುವ ಈ ಪ್ರಯತ್ನವು ತುಳು ಭಾಷೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಮತ್ತೊಂದು ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಯೋಜನೆಗಳೊಂದಿಗೆ ಜನರ ಮುಂದೆ ಬರಲಿದ್ದೇವೆ ಎಂದು ಐಲೇಸಾ – ದಿ ವಾಯ್ಸ್ ಆಫ್ ಓಶನ್ ಸಂಘಟನೆಯ ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.