ದಸರಾ ಸಂಭ್ರಮದ ಮೆರುಗು ಹೆಚ್ಚಿಸಲಿದೆ ಟೀಂ ಪಿಲಿ ಅಜನೆ ತಂಡದ “5ನೇ ವರ್ಷದ ಪಿಲಿ ಅಜನೆ” – ಬರ್ಕೆ ಫ್ರೆಂಡ್ಸ್ ತಂಡದಿಂದ ಹುಲಿಕುಣಿತ

0
3

ಮಂಗಳೂರು : ಮಂಗಳೂರು ದಸರಾ ಆಚರಣೆಯ ಪ್ರಯುಕ್ತ, ದೇವಿಯ ಆರಾಧನೆಯ ನವರಾತ್ರಿ ಸಂಭ್ರಮದಲ್ಲಿ ಭಕ್ತಿ ಹಾಗೂ ಕಲೆಯ ಸಂಗಮವಾಗಿ ತುಳುನಾಡಿನ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ರವಿರಾಜ್ ಚೌಟ ಸಹಭಾಗಿತ್ವದಲ್ಲಿ “ಪಿಲಿ ಅಜನೆ” ಕಾರ್ಯಕ್ರಮವು ಅಕ್ಟೋಬರ್ 21ರಂದು ಮಂಗಳೂರು ನಗರದ ಕೊಡಿಯಾಲ್ ಬೈಲ್ ಎಂಜಿ ರೋಡ್ ದೀಪಾ ಕಂಫರ್ಟ್ಸ್ ಹತ್ತಿರ ಬಹಳ ವಿಜ್ರಂಭಣೆಯಿಂದ ಜರುಗಲಿದೆ. 

ಮಧ್ಯಾಹ್ನ 03ಗಂಟೆಯಿಂದ ಪಿಲಿ ಅಜನೆ ವೇದಿಕೆಯಲ್ಲಿ ಕುಣಿತ ಭಜನೆ, ಚೆಂಡೆ ವಾದನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನೆರವೇರಲಿದೆ.

5ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮದ ಆರಂಭದಲ್ಲಿ ಕುಣಿತ ಭಜನೆ, ಗೊಂಬೆ ಬಳಗ, ಚೆಂಡೆ ವಾದನ, ಹುಲಿ ಕುಣಿತದೊಂದಿಗೆ ಭವ್ಯ ಶೋಭಾಯಾತ್ರೆಯು ಜರುಗಲಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಚೆಂಡೆ ಟ್ರೂಪ್ ಬಳಗದಿಂದ ಚೆಂಡೆ ಕಾರ್ಯಕ್ರಮ, ಸಾಂಸ್ಕೃತಿಕ ವೇದಿಕೆಯಲ್ಲಿ ಗ್ರೂಪ್ ಎಕ್ಸ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ವೈಭವ, ಭಕ್ತಿ ಭಾವದ ಸಂಗಮವಾಗಿ ಗುರುಕುಲ ಬಾಲಗೋಕುಲ ಪಾವೂರು ಹರೇಕಳ ತಂಡದಿಂದ ಕುಣಿತ ಭಜನೆ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ಬರ್ಕೆ ಫ್ರೆಂಡ್ಸ್(ರಿ.)” ತಂಡವು ಸಾಹಸಮಯ ಪ್ರದರ್ಶನದೊಂದಿಗೆ ಹುಲಿ ಕುಣಿತದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ ಹಾಗೂ ವಿವಿಧ ಗಣ್ಯರ ಸಮಾಗಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ, ಅತಿಥಿವರ್ಯರಿಗೆ ಗೌರವಾರ್ಪಣೆ ನೆರವೇರಲಿದೆ.

ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ದಸರಾ ವೈಭವಕ್ಕೆ ಮೆರುಗು ಹೆಚ್ಚಿಸಿಕೊಂಡು, ಸಹಸ್ರಾರು ಪ್ರೇಕ್ಷಕರನ್ನು ಮನರಂಜಿಸುತ್ತಾ ಮನೆ ಮಾತಾಗಿರುವ ಟೀಂ ಪಿಲಿ ಅಜನೆ ತಂಡವು ಈ ಬಾರಿ ಮತ್ತೆ ಹೊಸತನದೊಂದಿಗೆ ಘರ್ಜಿಸಲು ಸಿದ್ಧವಾಗಿದೆ.