ಕೆರೆಗೆ ಬಿದ್ದ ಕಾರು, ಒಂದೇ ಕುಟುಂಬದ ಮೂವರ ಸಾವು

0
78

ಮಡಿಕೇರಿ : ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ, ಬಾಡಗ ಬಾಣಂಗಾಲ ಗ್ರಾಮದ ಎಲ್ಕ್ ಹಿಲ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಿಜೇಶ್ (36), ಅವರ ಪತ್ನಿ ಪಮಿತಾ (34) ಹಾಗೂ ನಾಲ್ಕು ವರ್ಷದ ಮಗಳು ಲಿಯಾ ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಸಿದ್ದಾಪುರದಿಂದ ಬಾಡಗ ಬಾಣಂಗಾಲದ ಕಡೆಗೆ ಕುಟುಂಬದವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಶಿಲ್ಪಿ ಎಸ್ಟೇಟ್ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ತೋಟದ ಕೆರೆಯಲ್ಲಿ ಕಾರು ಬಿದ್ದಿರುವುದನ್ನು ಗಮನಿಸಿದ ಕಾರ್ಮಿಕರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೆರೆಯಿಂದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮಾಹಿತಿ ತಿಳಿದು ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.