ನ.1ರಂದು ಸಾಹೇಬರಕಟ್ಟೆಯಲ್ಲಿ 20ನೇ ಜನನಿ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮ

0
15

ಸಾಹೇಬರಕಟ್ಟೆ : ಕನ್ನಡ ಭಾಷೆ, ನೆಲ, ನುಡಿ ಮತ್ತು ಸಂಸ್ಕೃತಿಯ ವೈಭವವನ್ನು ಸಾರುವ ಉದ್ದೇಶದೊಂದಿಗೆ ಜನನಿ ಯುವ ಕನ್ನಡ ಸಂಘ (ರಿ.) ಸಾಹೇಬರಕಟ್ಟೆ ವತಿಯಿಂದ 20ನೇ ಜನನಿ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮವು ನವೆಂಬರ್ 1ರ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

“ನಾಳೆಗಾಗಿ ನುಡಿ… ನುಡಿಗಾಗಿ ಯುವ…” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಜಂಬೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಾಹೇಬರಕಟ್ಟೆಯವರೆಗೆ ಕನ್ನಡಾಂಭೆಯ ಭವ್ಯ ಪುರಮೆರವಣಿಗೆ ನಡೆಯಲಿದೆ. ಸ.ಹಿ.ಪ್ರಾ. ಶಾಲೆ ಸಾಹೇಬರಕಟ್ಟೆ, ಸ್ವಸಹಾಯ ಗುಂಪುಗಳು ಹಾಗೂ ಊರಿನ ಸಮಸ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಬಳಿಕ ಸಿಹಿತಿಂಡಿ ವಿತರಣೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಬಾಂಧವ್ಯ ಬೆಸುಗೆ’ ಶೀರ್ಷಿಕೆಯಡಿ ಕ್ರೀಡಾಕೂಟ ಆಯೋಜಿಸಲಾಗಿದೆ.

ಸಂಜೆ 4.30ರಿಂದ ಕೊಳ್ಳೆಬೈಲು ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯ ವೈಭವವನ್ನು ಬಿಂಬಿಸುವ ನೃತ್ಯ, ಗೀತಗಾಯನ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನನಿ ಯುವ ಕನ್ನಡ ಸಂಘದ ಅಧ್ಯಕ್ಷ ವಸಂತ ಭಂಡಾರಿ ವಹಿಸಲಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಂಪತ್ ಶೆಟ್ಟಿ ಎಸ್., ಸಾಹೇಬರಕಟ್ಟೆ ಜೈಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪ್ರಭು, ಕಾಜ್ರಳ್ಳಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಹೆಗ್ಡೆ, ಉದ್ಯಮಿ ವೈ. ಸಂಕಯ್ಯ ಶೆಟ್ಟಿ, ಸಂದೀಪ ಶೆಟ್ಟಿ ಶಿರಿಯಾರ ಮೇಲ್ಮನೆ, ಶರತ್ ಕುಮಾರ ಶೆಟ್ಟಿ, ಜಿ. ಪ್ರಸಾದ್ ಕಾಂಚನ್, ಯು. ಪ್ರಸಾದ ಆರ್. ಭಟ್, ಶಿವರಾಮ ಕೊಠಾರಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ, ಸಂದೇಶ್ ಕಿಣಿ ಚಾರಿಟೇಬಲ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ಸತೀಶ ಕಿಣಿ, ಸಂತೋಷ ಕೆ. ಕಾಂಚನ್ ಹಾಗೂ ಜನನಿ ಯುವ ಕನ್ನಡ ಸಂಘದ ಗೌರವಾಧ್ಯಕ್ಷ ಎಂ. ರವೀಂದ್ರನಾಥ ಕಿಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಜನನಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ

ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಹೇಬರಕಟ್ಟೆಯ ಮಹಾನ್ ರಕ್ತದಾನಿ ಪ್ರಕಾಶ್ ಪೂಜಾರಿ ಹಾಗೂ ಸ.ಹಿ.ಪ್ರಾ. ಶಾಲೆ ಸಾಹೇಬರಕಟ್ಟೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಜೇಂದ್ರ ಶೆಟ್ಟಿ ಅವರಿಗೆ ಜನನಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದರೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸುತ್ತಮುತ್ತಲಿನ ಶಾಲೆಗಳಲ್ಲಿ ಕನ್ನಡ ಭಾಷೆಯ ಪ್ರೋತ್ಸಾಹಕ್ಕಾಗಿ ಧನಸಹಾಯ ಹಾಗೂ ಉಚಿತ ಸೇವೆ ನೀಡಿದ ಚಾಲಕ ಮಿತ್ರರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿ ಹೆಸ್ಕುತ್ತೂರು ನಿರೂಪಿಸಲಿದ್ದಾರೆ.

ರಾತ್ರಿ 9.30ರಿಂದ ಜನನಿ ಯಕ್ಷೋತ್ಸವ–2026

ರಾತ್ರಿ 9.30ರಿಂದ ಜನನಿ ಯಕ್ಷೋತ್ಸವ–2026ರ ಅಂಗವಾಗಿ ಬಣ್ಣ, ಬೆಳಕಿನ ವೈಭವದೊಂದಿಗೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ತೆಂಕು ಮತ್ತು ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಅವತಾರ ವೇದಿಕೆ ಹಾಗೂ ಕಲ್ಯಾಣ ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂಭ್ರಮವನ್ನು ಸಾರುವ ಈ ವಾರ್ಷಿಕೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜನನಿ ಯುವ ಕನ್ನಡ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.